ದೆಹಲಿಯಲ್ಲಿ ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಸೋನಿಯಾ ಗಾಂಧಿ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್
ನವದೆಹಲಿ: ಎನ್ ಡಿಎ ಸರ್ಕಾರ ಸಾಧನೆ ಕಂಡ ಯೋಜನೆಗಳು ಮತ್ತು ಕಾರ್ಯಕ್ರಮಗಳು ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆರಂಭಗೊಂಡವುಗಳಾಗಿವೆ ಎಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
ಮೋದಿ ಸರ್ಕಾರ ಕೇವಲ ಮೂರು ವರ್ಷಗಳ ಆಡಳಿತಾವಧಿಯನ್ನು ಕಂಡಿದೆ. ಎಲ್ಲಿ ಸಾಮರಸ್ಯವಿತ್ತೋ ಅಲ್ಲಿ ಈಗ ಭಿನ್ನಾಭಿಪ್ರಾಯವಿದೆ. ಎಲ್ಲಿ ಸಹಿಷ್ಣುತೆಯಿತ್ತೋ ಅಲ್ಲಿ ಪ್ರಚೋದನೆಯಿದೆ. ಎಲ್ಲಿ ಶಾಂತಿಯಿತ್ತೋ ಅಲ್ಲಿ ಈಗ ಸಂಘರ್ಷ, ಉದ್ವಿಗ್ನತೆ ಮತ್ತು ಭೀತಿಯ ವಾತಾವರಣವಿದೆ. ಆರ್ಥಿಕ ಸಾಮರ್ಥ್ಯವಿದ್ದಲ್ಲಿ ಇಂದು ನಿಷ್ಕ್ರಿಯತೆ ಕಾಣುತ್ತಿದ್ದೇವೆ. ವಿವಿಧತೆಯಿದ್ದ ನಮ್ಮ ದೇಶದಲ್ಲಿ ಇಂದು ಇಡೀ ದೇಶವನ್ನು ಹಿಮ್ಮೆಟ್ಟಿಸುವ ಮತ್ತು ಸಂಕುಚಿತ ಮನಸ್ಸಿನವರು ಅಭಿಯಾನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಅವರು ಇಂದು ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಮಾತನಾಡಿ, ಎನ್ ಡಿಎ ಸರ್ಕಾರ ದೇಶದ ಬಡ ಮತ್ತು ನಿರ್ಗತಿಕ ಜನರಿಗೆ ಪ್ರಯೋಜನವಾಗುವ ಯಾವುದೇ ಯೋಜನೆ, ಕಾರ್ಯಕ್ರಮ ಜಾರಿಗೆ ತರುವಲ್ಲಿ ವಿಫಲವಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ, ನೋಟುಗಳ ಅಮಾನ್ಯತೆಯನ್ನು ಟೀಕಿಸಿದ ಅವರು, ನೋಟುಗಳ ಅಮಾನ್ಯತೆ ಒಂದು ಯಶಸ್ವಿ ಅಭಿಯಾನ ಎಂದು ಹೇಳುತ್ತಿರುವ ಕೇಂದ್ರ ಸರ್ಕಾರ ಇಲ್ಲಿಯವರೆಗೆ ಚಲಾವಣೆಯಲ್ಲಿದ್ದ ಎಷ್ಟು ಕಪ್ಪು ಹಣವನ್ನು ಬ್ಯಾಂಕುಗಳಿಗೆ ಹಿಂತಿರುಗಿಸಲಾಗಿದೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುತ್ತಿಲ್ಲ. ಇತ್ತೀಚೆಗೆ ಬಿಡುಗಡೆಗೊಂಡ ದೇಶದ ಆರ್ಥಿಕ ಪ್ರಗತಿ ದರವನ್ನು ನೋಡಿದರೆ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಹೇಳಿದಂತೆ ನೋಟುಗಳ ಅಮಾನ್ಯತೆ ದೇಶದ ಆರ್ಥಿಕ ಪ್ರಗತಿಯನ್ನು ಕುಂಠಿತಗೊಳಿಸಿದೆ ಎಂದರು.
ಇದೇ ಸಂದರ್ಭದಲ್ಲಿ ಸೋನಿಯಾ ಗಾಂಧಿಯವರು ಕೇಂದ್ರದ ಮೇಕ್ ಇನ್ ಇಂಡಿಯಾ ಯೋಜನೆಯನ್ನು ಕೂಡ ಟೀಕಿಸಿದರು. ಇದು ದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವಲ್ಲಿ ಮತ್ತು ಹೂಡಿಕೆಯನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ನಿರುದ್ಯೋಗ, ರೈತರ ಆತ್ಮಹತ್ಯೆ ಹೆಚ್ಚಾಗುತ್ತಿವೆ ಎಂದರು.
ಬಿಜೆಪಿ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವ ಅವಧಿಯನ್ನು 2019ರಿಂದ 2022ಕ್ಕೆ ಮುಂದೂಡಿದೆ ಎಂದು ಸೋನಿಯಾ ಗಾಂಧಿ ಟೀಕಿಸಿದರು.
ಗೋವುಗಳ ಮಾರಾಟದ ಬಗ್ಗೆ ಕೇಂದ್ರ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆ ಬಗ್ಗೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿ ವಿಭಿನ್ನ ತತ್ತ್ವಗಳನ್ನು ಮತ್ತು ನಂಬಿಕೆಗಳನ್ನು ಅನುಸರಿಸುವವರ ಜೀವನೋಪಾಯ ಮತ್ತು ಆಹಾರ ಪದ್ಧತಿಗಳ ಮೇಲಿನ ಆಕ್ರಮಣ ಇದಾಗಿದೆ ಎಂದರು.
ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಜಾದ್, ಎನ್ ಡಿಎ ಸರ್ಕಾರ ಮೂರು ವರ್ಷಗಳ ಆಡಳಿತಾವಧಿಯನ್ನು ಪೂರೈಸಿದೆ. ಸರ್ಕಾರಿ ಹಣದಲ್ಲಿ ವರ್ಷಾಚರಣೆಯನ್ನು ಮಾಡುತ್ತಿದ್ದಾರೆ. ಆದರೆ ಕಳೆದ ಮೂರು ವರ್ಷಗಳು ದೇಶದ ಜನತೆಗೆ ದುಃಖವಾಗಿದೆ ಎಂದರು.