ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಬಿ.ಕಾಂ ಪದವಿ ಪಠ್ಯ ಪುಸ್ತಕದಲ್ಲಿ ಇ-ಮೇಲ್ ಗಳನ್ನು ಅತ್ಯಂತ ಚಿಕ್ಕದಾಗಿ ಸ್ಕರ್ಟ್ ನಂತೆ ಆಸಕ್ತಿಕರವಾಗಿ ಬರೆಯಬೇಕೆಂದು ವಿಲಕ್ಷಣ ಹೋಲಿಕೆ ಮಾಡಲಾಗಿದೆ.
ಮೂಲಭೂತ ವ್ಯವಹಾರ ಸಂವಹನ ಎಂಬ ಪುಸ್ತಕವನ್ನು ಲೇಖಕ ಸಿಬಿ ಗುಪ್ತಾ ಬರೆದಿದ್ದು ಅದರಲ್ಲಿ ಇಮೇಲ್ ಗಳನ್ನು ಹುಡುಗಿಯರು ಧರಿಸುವ ಸ್ಕರ್ಟ್ ಗಳಿಗೆ ಹೋಲಿಕೆ ಮಾಡಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ದೆಹಲಿ ವಿಶ್ವವಿದ್ಯಾಲಯದ ಹೆಚ್ಚಿನ ಕಾಲೇಜುಗಳಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳ ಕಲಿಕೆಗೆ ಈ ಪಠ್ಯಪುಸ್ತಕವನ್ನು ಶಿಫಾರಸು ಮಾಡಿದ್ದಾರೆ.
ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಸಿಬಿ ಗುಪ್ತಾ ದೆಹಲಿ ವಿಶ್ವವಿದ್ಯಾಲಯದ ಸಂಯೋಜಿತ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು.
ಕಳೆದೊಂದು ದಶಕದಿಂದ ಈ ಪಠ್ಯಪುಸ್ತಕ ಮುದ್ರಣವಾಗಿ ಹಂಚಿಕೆಯಾಗುತ್ತಿದೆ. ಅದರಲ್ಲಿ ಇಮೇಲ್ ಸಂದೇಶಗಳು ಸ್ಕರ್ಟ್ ಗಳ ರೀತಿ ಇರಬೇಕು. ಚಿಕ್ಕದಾಗಿ ಆಸಕ್ತಿ ಹುಟ್ಟಿಸಬೇಕು ಜೊತೆಗೆ ಎಲ್ಲಾ ಪ್ರಮುಖ ಅಂಶಗಳನ್ನು ಅದು ಒಳಗೊಂಡಿರಬೇಕು ಎಂದು ಲೇಖಕರು ಬರೆದಿದ್ದಾರೆ.
ಈ ಬಗ್ಗೆ ತನ್ನ ಅಭಿಪ್ರಾಯ ತಿಳಿಸಿದ ಹೆಸರು ಹೇಳಿಕೊಳ್ಳಲಿಚ್ಛಿಸದ ವಿದ್ಯಾರ್ಥಿಯೊಬ್ಬ, ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದ ವರ್ಗಗಳ ಕೆಲ ವಿದ್ಯಾರ್ಥಿಗಳು ಪಠ್ಯಪುಸ್ತಕದಲ್ಲಿ ಬರೆದ ಪ್ರತಿಯೊಂದು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ. ಅಂತಹ ವಾಕ್ಯಗಳು ನಮ್ಮ ಸಮಾಜದಲ್ಲಿ ಹೋಲಿಕೆಗಳು ಲೈಂಗಿಕತೆಯನ್ನು ಹಗುರವಾಗಿ ನೋಡುತ್ತವೆ ಎಂಬುದನ್ನು ಅರ್ಥೈಸಿಕೊಳ್ಳಲು ಹೋಗುವುದಿಲ್ಲ ಎನ್ನುತ್ತಾರೆ.
ನಮ್ಮ ಕೋರ್ಸ್ ಗಳಿಗೆ ಇಂತಹ ಪಠ್ಯಪುಸ್ತಕದ ಅವಶ್ಯಕತೆಯೇನಿದೆ ಎಂದು ಪ್ರಶ್ನಿಸುವ ಧೈರ್ಯ ನಮಗಿದೆ. ಕಳೆದ 10 ವರ್ಷಗಳಿಂದ ಮರು ಮುದ್ರಣವಾಗುತ್ತಿದ್ದರೂ ಕೂಡ ಇದರ ಬಗ್ಗೆ ಯಾರೂ ಏಕೆ ಪ್ರಶ್ನೆ ಮಾಡಲಿಲ್ಲ ಎಂದು ವಿದ್ಯಾರ್ಥಿ ಪ್ರಶ್ನೆ ಮಾಡುತ್ತಾರೆ.
ಇಂದು 70ರ ವಯೋಮಾನದಲ್ಲಿರುವ ಪಠ್ಯಪುಸ್ತಕದ ಲೇಖಕ ಸಿಬಿ ಗುಪ್ತಾ, ಜನರ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ಕ್ಷಮೆ ಕೋರಿದ್ದಾರೆ. ವಿದೇಶಿ ಲೇಖಕರೊಬ್ಬರ ಲೇಖನದಿಂದ ಈ ಹೋಲಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ನಾನು ಈಗಾಗಲೇ ಪಠ್ಯಪುಸ್ತಕದಿಂದ ಹೇಳಿಕೆಯನ್ನು ಅಳಿಸಿಹಾಕಿದ್ದೇನೆ. ಇತ್ತೀಚಿನ ಆವೃತ್ತಿ ಪ್ರಕಟಗೊಳ್ಳುವ ಮುಂಚೆ ಆ ವಿಷಯವನ್ನು ತೆಗೆದುಹಾಕುವಂತೆ ಪ್ರಕಾಶಕರಿಗೆ ತಿಳಿಸುತ್ತೇನೆ ಎಂದು ಗುಪ್ತಾ ಪಿಟಿಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚೆಗೆ ಸಿಬಿಎಸ್ಇಯ 12ನೇ ತರಗತಿ ಶಾರೀರಿಕ ಶಿಕ್ಷಣ ಪಠ್ಯಪುಸ್ತಕದಲ್ಲಿ ಮಹಿಳೆಯರ ಸುಂದರ ಶರೀರಕ್ಕೆ 36-24-36 ಆಕಾರ ಉತ್ತಮ ಎಂದು ಬರೆದ ಮತ್ತೊಬ್ಬ ಲೇಖಕರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos