ದೇಶ

ಮಧ್ಯಪ್ರದೇಶ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಸಾವಿನ ಸಂಖ್ಯೆ 25ಕ್ಕೆ ಏರಿಕೆ

Lingaraj Badiger
ಬಲಘಾಟ್: ಮಧ್ಯಪ್ರದೇಶದ ಬಲಘಾಟ್ ಜಿಲ್ಲೆಯ ಖೇರಿ ಗ್ರಾಮದ ಪಟಾಕಿ ಕಾರ್ಖಾನೆಯೊಂದರಲ್ಲಿ ಬುಧವಾರ ಸಂಭವಿಸಿದ ಭಾರಿ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ ಗುರುವಾರ 25ಕ್ಕೆ ಏರಿಕೆಯಾಗಿದೆ.
ಅಗ್ನಿ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 9 ಮಂದಿಯ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಜಿಲ್ಲಾ ಕೇಂದ್ರದಿಂದ ಸುಮಾರು 10 ಕಿ.ಮೀ.ದೂರದಲ್ಲಿರುವ ಖೇರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 20 ಮಹಿಳೆಯರು ಹಾಗೂ ಐದು ಮಂದಿ ಪುರುಷರು ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಜಿ. ಜನಾರ್ದನ್ ಅವರು ಪಿಟಿಐಗೆ ತಿಳಿಸಿದ್ದಾರೆ.
ಐವರು ಗಾಯಾಳುಗಳಿಗೆ ರಾಜ್ಯದ ಹೊರಗೆ ಮತ್ತು ಇಬ್ಬರು ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಪಟಾಕಿ ಕಾರ್ಖೆನೆಯ ಅಗ್ನಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಆದರೆ, ಪಟಾಕಿಗಳ ದಾಸ್ತಾನು ಇರಿಸಿದ್ದ ಸ್ಥಳದಲ್ಲಿ ಯಾರೋ ಬೀಡಿ ಸೇದಿ ಎಸೆದು ಹೋಗಿದು ಅಗ್ನಿ ದುರಂತಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
SCROLL FOR NEXT