ದೇಶ

ಮಧ್ಯ ಪ್ರದೇಶ ರೈತರ ಹೋರಾಟ; ಶಾಂತಿ ಸ್ಥಾಪನೆಗಾಗಿ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಉಪವಾಸ!

Srinivasamurthy VN

ಭೋಪಾಲ್: ಮಂಡಸೌರ್ ರೈತರ ಮೇಲಿನ ಗೋಲಿಬಾರ್ ಪ್ರಕರಣದ ನಂತರ ಮಧ್ಯಪ್ರದೇಶದಲ್ಲಿ ಭುಗಿಲೆದ್ದಿರುವ ಹಿಂಸಾಚಾರ ತಡೆಗೆ ಸ್ವತಃ ಸಿಎಂ ಶಿವರಾಜ್ ಸಿಂಗ್ ಚೌಹ್ವಾಣ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.

ಬೆಳಗ್ಗೆ 11 ಗಂಟೆಗೆ ದಸರಾ ಮೈದಾನಕ್ಕೆ ಆಗಮಿಸಿದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಹಾಗೂ ಕೆಲ ಸಚಿವರು ಉಪವಾಸ ಸತ್ಯಾಗ್ರಹ ಕುಳಿತಿದ್ದು, ಈ ವೇಳೆ ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ. ಇದೇ ವೇಳೆ ರೈತರು  ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ ಮನವಿ ಮಾಡಿದ ಸಿಎಂ, ರೈತರ ಬೇಡಿಕೆ ಈಡೇರಿಕೆಗೆ ಪ್ರಯತಚ್ನಿಸುವುದಾಗಿ ತಿಳಿಸಿದ್ದಾರೆ. ಅಂತೆಯೇ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ರೈತರ ಸಮಸ್ಯೆಗಳ  ಪರಿಹಾರಕ್ಕೆ ಪ್ರಾಧಾನ್ಯತೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸಿಎಂ ಶಿವರಾಜ್ ಸಿಂಗ್ ಅವರ ರೈತರೊಂದಿಗೆ ಚರ್ಚೆ ನಡೆಸುವ ನಿರ್ಧಾರವನ್ನು ರಾಷ್ಟ್ರೀಯ ಕಿಸಾನ್ ಮಜ್ದೂರ್ ಸಂಘ ಸ್ವಾಗತಿಸಿದ್ದು, ಕೇವಲ ನಾವು ಮಾತ್ರವಲ್ಲ ಇತರೆ ರೈತಪರ ಸಂಘಟನೆಗಳೂ ಕೂಡ ಸಿಎಂ  ನಿರ್ಧಾರವನ್ನು ಸ್ವಾಗತಿಸಿವೆ. ಸಿಎಂ ರೊಂದಿಗೆ ಯಾವುದೇ ಕ್ಷಣ ಬೇಕಾದರೂ ನಾವು ಚರ್ಚೆಗೆ ಸಿದ್ಧ. ನಮ್ಮ ಉದ್ದೇಶವೇನಿದ್ದರೂ ರೈತರ ಸಮಸ್ಯೆ ಬಗೆಹರಿಯಬೇಕು ಎಂದು ಹೇಳಿದೆ.

ರಾಜಕೀಯ ಡ್ರಾಮಾ: ಕಾಂಗ್ರೆಸ್ ಕಿಡಿ
ಇನ್ನು ಸಿಎಂ ಶಿವರಾಜ್ ಸಿಂಗ್ ಅವರ ಉಪವಾಸವನ್ನು ರಾಜಕೀಯ ನಾಟಕ ಎಂದು ಕಿಡಿಕಾರಿದ ಕಾಂಗ್ರೆಸ್, ರೈತರ ಸಮಸ್ಯೆ ಈಡೇರಿಸುವ ಬದಲು ಸರ್ಕಾರ ರೈತರೊಂದಿಗೆ ಚರ್ಚೆ ನಡೆಸುವ ನಾಟಕವಾಡುತ್ತಿದೆ ಎಂದು  ಕಿಡಿಕಾರಿದೆ. ಅಲ್ಲದೆ ರೈತರ ಮೇಲಿನ ಗೋಲಿಬಾರ್ ಸರ್ಕಾರದ ವೈಫಲ್ಯವನ್ನು ತೋರಿಸುತ್ತಿದೆ ಎಂದು ಹೇಳಿದೆ.

ಸಾಲ ಮನ್ನಾ ಮಾಡುವಂತೆ ಮತ್ತು ಬೆಳೆಗೆ ಬೆಂಬಲ ಬೆಲೆ ಘೋಷಿಸುವಂತೆ ಒತ್ತಾಯಿಸಿ ಕಳೆದ ಒಂದು ವಾರದಿಂದ ಮಧ್ಯಪ್ರದೇಶ ರೈತರು ಉಗ್ರ ಹೋರಾಟ ನಡೆಸುತ್ತಿದ್ದು, ಪರಿಸ್ಥಿತಿ ನಿಯಂತ್ರಿಸುವುದಕ್ಕಾಗಿ ಕಳೆದ ಮಂಗಳವಾರ  ಪೊಲೀಸರು ನಡೆಸಿದ ಗೋಲಿಬಾರ್ ನಲ್ಲಿ ಐವರು ರೈತರು ಮೃತಪಟ್ಟಿದ್ದಾರೆ.

SCROLL FOR NEXT