ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ನಿರ್ನಾಮ ಮಾಡಲು ಪಣ ತೊಟ್ಟಿರುವ ಭಾರತೀಯ ಸೇನೆ ಅಡಗುದಾಣದಲ್ಲಿರುವ ಭಯೋತ್ಪಾದಕರನ್ನು ಪತ್ತೆ ಮಾಡಲು ವಾಲ್ ರಾಡಾರ್ ಗಳನ್ನು ಬಳಕೆ ಮಾಡಲು ನಿರ್ಧರಿಸಿದೆ.
ಭಯೋತ್ಪಾದರ ವಿರುದ್ಧ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ವಾಲ್ ರಾಡಾರ್ ಗಳನ್ನು ಬಳಕೆ ಮಾಡಲು ಪ್ರಾರಂಭಿಸಿರುವ ಸೇನೆ, ಈಗಾಗಲೇ ವಾಲ್ ರಾಡಾರ್ ಸಿಸ್ಟಮ್ ಗಳನ್ನು ಅಮೆರಿಕಾ ಹಾಗೂ ಇಸ್ರೇಲ್ ನಿಂದ ಆಮದು ಮಾಡಿಕೊಂಡಿರುವುದಾಗಿ ಹೇಳಿದೆ. ವಾಲ್ ರಾಡಾರ್ ವ್ಯವಸ್ಥೆ ಉಗ್ರರನ್ನು ಪತ್ತೆ ಮಾಡಲು ಸೇನಾ ಪಡೆಗಳಿಗೆ ಸಹಕಾರಿಯಾಗಲಿದೆ. ಗುಪ್ತಚರ ಇಲಾಖೆಯ ಮಾಹಿತಿಯ ಹೊರತಾಗಿಯೂ ಜಮ್ಮು-ಕಾಶ್ಮೀರ ಪೊಲೀಸರು ಉಗ್ರರಿರುವ ಪ್ರದೇಶಗಳನ್ನು ಪತ್ತೆ ಮಾಡುವುದಕ್ಕೆ ವಿಫಲರಾದ ಹಿನ್ನೆಲೆಯಲ್ಲಿ ವಾಲ್ ರಾಡಾರ್ ವ್ಯವಸ್ಥೆಯನ್ನು ಬಳಕೆ ಮಾಡಲು ಸೇನೆ ಮುಂದಾಗಿದೆ.
ಕಳೆದ ವರ್ಷ ಜುಲೈ 8 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖಂಡ ಬುರ್ಹಾನ್ ವಾನಿಯನ್ನು ಹತ್ಯೆ ಮಾಡುವುದಕ್ಕೂ ಮುನ್ನ ಸೇನಾ ಪಡೆಯ ಸಿಬ್ಬಂದಿಗಳು ಆತನ ಅಡಗುದಾಣದ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ಇದ್ದರೂ ಮೂರು ಸುತ್ತಿನ ಶೋಧಕಾರ್ಯಾಚರಣೆ ನಡೆಸಿದ್ದರು. ಉಗ್ರರಿದ್ದ ಮನೆಯಲ್ಲೇ ಎರಡು ಬಾರಿ ಶೋಧಕಾರ್ಯಾಚರಣೆ ನಡೆಸಿದ್ದರಾದರೂ ಉಗ್ರರು ಅಡಗಿಕೊಂಡಿರುವ ಸ್ಥಳವನ್ನು ಗುರುತಿಸಲು ಸೇನೆಯ ಸಿಬ್ಬಂದಿಗಳಿಗೆ ಸಾಧ್ಯವಾಗಿರಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಾಲ್ ರಾಡಾರ್ ಉಪಯೋಗಕ್ಕೆ ಬರಲಿದೆ.
ಡಿಆರ್ ಡಿಒ ಸಹ ಎರಡು ಮಾದರಿಯ ದಿವ್ಯಚಕ್ಷು ಎಂಬ ಹೆಸರಿನ ಪೋರ್ಟಬಲ್ ರಾಡಾರ್ ಗಳನ್ನು ಅಭಿವೃದ್ಧಿಪಡಿಸಿದೆ. ಒಂದು ಕೈಲಿಟ್ಟುಕೊಂಡು ಬಳಕೆ ಮಾಡಬಹುದಾದ ರಾಡಾರ್ ಆದರೆ ಮತ್ತೊಂದು ಟ್ರೈಪಾಡ್ ಹೊಂದಿರುವ ಈ ರಾಡಾರ್, ಹ್ಯಾಂಡ್ ಹೆಲ್ಡ್ ರಾಡಾರ್ ಗಳು 20 ಮೀಟರ್ ದೂರದ ವರೆಗೆ ಗೋಡೆಯ ಒಳಭಾಗದಲ್ಲಿರುವ ಚಿತ್ರಗಳನ್ನು ನೀಡುವ ಸಾಮರ್ಥ್ಯ ಹೊಂದಿದ್ದರೆ, ಟ್ರೈಪಾಡ್ ಹೊಂದಿರುವ ರಾಡಾರ್ ಗಳು 40 ಮೀಟರ್ ದೂರದ ವರೆಗೆ ಗೋಡೆಯ ಒಳಭಾಗದಲ್ಲಿರುವ ಚಿತ್ರಗಳನ್ನು ನೀಡುವ ಸಾಮರ್ಥ್ಯ ಹೊಂದಿದೆ. ಒಟ್ಟಾರೆ ವಾಲ್ ರಾಡಾರ್ ನಿಂದಾಗಿ ಉಗ್ರರನ್ನು ಹೊಡೆದುರುಳಿಸುವುದಕ್ಕೆ ಸೇನೆಗೆ ಮತ್ತಷ್ಟು ಬಲ ಬಂದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics