ಮಂಡಸೌರ್: ಹಿಂಸಾಚಾರ ಪೀಡಿತ ಮಂಡಸೌರ್ ಸಾಮಾನ್ಯ ಸ್ಥಿತಿಗೆ ಮರಳುತ್ತಿದ್ದು, ಬಿಜೆಪಿ ಸಂಸದ ಸುಧೀರ್ ಗುಪ್ತಾ ಹಿಂಸಾಚಾರ ನಡೆಯಲು ಕಾಂಗ್ರೆಸ್ ಪಕ್ಷದ ಪ್ರಚೋದನೆಯೇ ಕಾರಣ ಎಂದು ಆರೋಪಿಸಿದ್ದಾರೆ.
ರೈತರ ಪ್ರತಿಭಟನೆಗೆ ವಿಪಕ್ಷ ನೇತೃತ್ವ ವಹಿಸಿತ್ತು. ಕಾಂಗ್ರೆಸ್ ನ ಪ್ರಚೋದನೆಯಿಂದಲೇ ರೈತರು ಹಿಂಸಾಚಾರದ ಮಾರ್ಗ ಹಿಡಿದರು ಎಂದು ಮಂಡಸೌರ್ ನ ಬಿಜೆಪಿ ಸಂಸದ ಸುಧೀರ್ ಗುಪ್ತಾ ಹೇಳಿದ್ದಾರೆ. ಕೇರಳದಲ್ಲಿ ಇತ್ತೀಚೆಗಷ್ಟೆ ಯೂತ್ ಕಾಂಗ್ರೆಸ್ ನ ನಾಯಕರು ಕರುವಿನ ಕತ್ತು ಸೀಳಿ ಗೋಹತ್ಯೆ ಮಾಡಿರುವ ಪ್ರಕರಣದಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಕಾಂಗ್ರೆಸ್ ಮಂಡಸೌರ್ ನಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ ಎಂದು ಗುಪ್ತಾ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ್ದಾರೆ.
ಮಂಡಸೌರ್ ನಲ್ಲಿ ನಡೆದ ಪ್ರತಿಭಟನೆ ರೈತರ ಪ್ರತಿಭಟನೆಯಾಗಿರಲಿಲ್ಲ. ಕಾಂಗ್ರೆಸ್ ನ ಪ್ರತಿಭಟನೆಯಾಗಿತ್ತು. ಕಾಂಗ್ರೆಸ್ ಇದಕ್ಕೆ ಸರಿಯಾದ ಬೆಲೆ ತೆರಲಿದೆ ಎಂದು ಎಚ್ಚರಿಸಿದ್ದಾರೆ. ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಪ್ರತಿಭಟನೆ ನಡೆಸಲು, ಬೇಡಿಕೆಗಳನ್ನು ಮುಂದಿಡಲು ರೈತರಿಗೆ ಹಕ್ಕಿದೆ, ಆದರೆ ರೈತರು ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರಕ್ಕಿಳಿಯುತ್ತಾರೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಇದು ನಡೆದಿರುವುದು ಕಾಂಗ್ರೆಸ್ ನ ಪ್ರಚೋದನೆಯಿಂದಲೇ ಎಂದು ಹೇಳಿದ್ದಾರೆ.