ಪ್ರಧಾನ ಮಂತ್ರಿ ನರೇಂದ್ರ ಮೋದಿ
ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇದೇ ತಿಂಗಳ 25 ಮತ್ತು 26ರಂದು ವಾಷಿಂಗ್ಟನ್ ಗೆ ಭೇಟಿ ನೀಡಲಿದ್ದಾರೆ.
ಕಳೆದ ಜನವರಿ 20ರಂದು ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ಮೇಲೆ ಮೋದಿಯವರ ಮೊದಲ ಅಮೆರಿಕಾ ಭೇಟಿ ಇದಾಗಿದೆ.
ಡೊನಾಲ್ಡ್ ಟ್ರಂಪ್ ಜೊತೆ ಪ್ರಧಾನಿ ಮೋದಿಯವರು ಈಗಾಗಲೇ ಮೂರು ಸಲ ದೂರವಾಣಿ ಮೂಲಕ ಮಾತನಾಡಿದ್ದಾರೆ. ಪ್ಯಾರಿಸ್ ಹವಾಮಾನ ವಿನಿಮಯ ಒಪ್ಪಂದದಿಂದ ಹಿಂದೆ ಸರಿಯುವ ಬಗ್ಗೆ ನಿರ್ಧಾರ ಘೋಷಿಸಿ ಭಾರತದ ಬಗ್ಗೆ ಪ್ಯಾರಿಸ್ ಒಪ್ಪಂದ ಕುರಿತು ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ಈ ಭೇಟಿ ನಡೆಯುತ್ತಿರುವುದು ಕುತೂಹಲ ಮೂಡಿಸಿದೆ. ಹವಾಮಾನ ಒಪ್ಪಂದಕ್ಕೆ ಸಹಿ ಹಾಕಲು ಅಭಿವೃದ್ಧಿ ಹೊಂದಿದ ದೇಶಗಳಿಂದ ಶತಕೋಟಿ ಡಾಲರ್ ಗಳಷ್ಟು ಹಣವನ್ನು ಭಾರತ ಮತ್ತು ಇತರ ದೇಶಗಳು ಪಡೆದುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಡೊನಾಲ್ಡ್ ಟ್ರಂಪ್ ಆರೋಪಿಸಿದ್ದರು.
ಕೆಲವು ಭಿನ್ನಾಭಿಪ್ರಾಯಗಳ ನಡುವೆಯೂ ಮೋದಿ ಹಾಗೂ ಟ್ರಂಪ್ ಅವರು ಎರಡೂ ದೇಶಗಳ ಹಿತಾಸಕ್ತಿಗಳಿಗೆ ಸಂಬಂಧಪಟ್ಟ ವಿಷಯಗಳಾದ ದಕ್ಷಿಣ ಏಷ್ಯಾ, ನೆರೆಯ ಪಾಕಿಸ್ತಾನದಿಂದ ಉಗ್ರರ ಒಳನುಸುಳುವಿಕೆ, ಭಯೋತ್ಪಾದನೆ ಮತ್ತು ಪರಮಾಣು ಪೂರೈಕೆ ರಾಷ್ಟ್ರಗಳಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕೆ ಒತ್ತಾಯ ಇತ್ಯಾದಿ ವಿಷಯಗಳ ಕುರಿತು ಚರ್ಚೆ ನಡೆಸಲಿದ್ದಾರೆ. ಪ್ಯಾರಿಸ್ ಒಪ್ಪಂದಕ್ಕೆ ಭಾರತದ ಬೆಂಬಲವನ್ನು ಮೋದಿ ಪುನರುಚ್ಛರಿಸಿದ್ದು ಪ್ಯಾರಿಸ್ ಒಪ್ಪಂದದಡಿ ಮಾಡಿಕೊಂಡ ಬದ್ಧತೆಗಿಂತಲೂ ಮುಂದೆ ಹೋಗಲು ಬಯಸುವುದಾಗಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics