

ಗ್ವಾಲಿಯರ್: ನವವಿವಾಹಿತ ಜೋಡಿಯೊಂದು ಮೃಗಾಲಯ ವೀಕ್ಷಣೆಗೆ ಬಂದ ಸಂದರ್ಭದಲ್ಲಿ ಪತ್ನಿ ಲವರ್ ಜೊತೆ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಮಧ್ಯ ಪ್ರದೇಶದಲ್ಲಿ ವರದಿಯಾಗಿದೆ.
ಮಧ್ಯಪ್ರದೇಶದ ಗ್ವಾಲಿಯರ್ ಮೃಗಾಲಯದ ಹೊರಭಾಗದಲ್ಲಿ ಪತಿ ಬೈಕ್ ಪಾರ್ಕ್ ಮಾಡಲು ಹೋದ ಸಂದರ್ಭದಲ್ಲಿ ನವವಿವಾಹಿತ ಪತ್ನಿ ಮತ್ತೊಬ್ಬ ವ್ಯಕ್ತಿಯ ಜೊತೆ ಬೈಕ್‌ನಲ್ಲಿ ಪರಾರಿಯಾಗಿದ್ದಾರೆ ಎನ್ನಲಾದ ಘಟನೆ ವರದಿಯಾಗಿದೆ.
ಈ ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಪ್ರಕರಣದ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೂಲಗಳ ಪ್ರಕಾರ ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ನರ್ವಾರ್ ನಿವಾಸಿಯಾದ 21 ವರ್ಷದ ಯುವಕ ತನ್ನ 18 ವರ್ಷದ ಪತ್ನಿಯೊಂದಿಗೆ ಮಂಗಳವಾರ ಗ್ವಾಲಿಯರ್‌ಗೆ ಬಂದಿದ್ದರು. ಇಬ್ಬರೂ ಮೃಗಾಲಯಕ್ಕೆ ಭೇಟಿ ನೀಡಿ, ಬಳಿಕ ಸಂಬಂಧಿಕರನ್ನು ಭೇಟಿಯಾಗಲು ಯೋಜಿಸಿದ್ದರು ಎಂದು ತಿಳಿದುಬಂದಿದೆ.
ಪತಿ ಬೈಕ್ ಪಾರ್ಕ್ ಮಾಡುವಷ್ಟರಲ್ಲಿ ಪತ್ನಿ ನಾಪತ್ತೆ!
ಮೃಗಾಲಯದ ಬಳಿ ತಲುಪಿದ ಬಳಿಕ ಪತಿ ತನ್ನ ಪತ್ನಿಗೆ ಪ್ರವೇಶದ್ವಾರದ ಸಮೀಪ ಕಾಯುವಂತೆ ಹೇಳಿ, ಬೈಕ್ ನಿಲ್ಲಿಸಲು ತೆರಳಿದ್ದ ಎನ್ನಲಾಗಿದೆ. ಇದಾದ ಕೆಲವೇ ನಿಮಿಷಗಳಲ್ಲಿ ವಾಪಸ್ ಬಂದಾಗ ಪತ್ನಿ ಅಲ್ಲಿರಲಿಲ್ಲ. ಸುತ್ತಮುತ್ತ ಹುಡುಕಿದರೂ ಆಕೆ ಪತ್ತೆಯಾಗಲಿಲ್ಲ. ಬಳಿಕ ಮತ್ತೊಬ್ಬ ವ್ಯಕ್ತಿಯೊಂದಿಗೆ ಬೈಕ್‌ನಲ್ಲಿ ಆಕೆ ತೆರಳಿದ್ದಾಳೆ ಎಂಬ ಮಾಹಿತಿ ಪತಿಗೆ ಸಿಕ್ಕಿದೆ ಎಂದು ವರದಿಯಾಗಿದೆ.
26 ಸೆಕೆಂಡ್ ನಲ್ಲೇ ಗ್ರೇಟ್ ಎಸ್ಕೇಪ್!
ಈ ಸಂಪೂರ್ಣ ಘಟನೆ ಸುಮಾರು 26 ಸೆಕೆಂಡ್‌ಗಳಲ್ಲಿ ನಡೆದಿರಬಹುದು ಎನ್ನಲಾಗಿದ್ದು, ಘಟನೆಗೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಪತ್ನಿಯನ್ನು ಹುಡುಕಿದರೂ ಪತ್ತೆ ಮಾಡಲಾಗದ ಹಿನ್ನೆಲೆಯಲ್ಲಿ ಯುವಕ ತನ್ನ ಚಿಕ್ಕಪ್ಪನೊಂದಿಗೆ ಪಡಾವ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ.
ಅರ್ಮಾನ್ ಖಾನ್ ವಿರುದ್ಧ ಪತಿ ದೂರು
ದೂರಿನಲ್ಲಿ ಅರ್ಮಾನ್ ಖಾನ್ ಎಂಬ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿರುವ ಪತಿ, ಆತ ತನ್ನ ಪತ್ನಿಯನ್ನು ಆಮಿಷವೊಡ್ಡಿ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾನೆ. ಅಲ್ಲದೆ, ಪತ್ನಿಯನ್ನು ಅಪರಿಚಿತ ಸ್ಥಳಕ್ಕೆ ಕರೆದೊಯ್ದಿರಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾನೆ.
ಪಡಾವ್ ಪೊಲೀಸ್ ಠಾಣೆಯ ಉಸ್ತುವಾರಿ ಶೈಲೇಂದ್ರ ಭಾರ್ಗವ್ ಅವರ ಪ್ರಕಾರ, ಮೃಗಾಲಯದ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಮಹಿಳೆ ಯಾರೊಂದಿಗೆ ತೆರಳಿದ್ದಾಳೆ ಮತ್ತು ಯಾವ ದಿಕ್ಕಿನಲ್ಲಿ ಪ್ರಯಾಣಿಸಿದ್ದಾಳೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಮಹಿಳೆ ಮತ್ತು ಅರ್ಮಾನ್ ಖಾನ್ ಅವರ ಮೊಬೈಲ್ ಫೋನ್‌ಗಳ ಸ್ಥಳ ಮಾಹಿತಿ (ಲೊಕೇಶನ್) ಆಧರಿಸಿಯೂ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ವರದಿಯಾಗಿದೆ.
ಮಹಿಳೆ ಸ್ವಯಂಪ್ರೇರಿತವಾಗಿ ತೆರಳಿದ್ದಾಳೆಯೇ ಅಥವಾ ಯಾರಾದರೂ ಆಮಿಷವೊಡ್ಡಿ ಕರೆದೊಯ್ದಿದ್ದಾರೆಯೇ ಎಂಬುದು ಆಕೆಯನ್ನು ಪತ್ತೆಹಚ್ಚಿ ಹೇಳಿಕೆ ದಾಖಲಿಸಿದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದೆ.