ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ
ಅಹ್ಮದಾಬಾದ್: ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿಯವರ ಮೇಲೆ ವ್ಯಕ್ತಿಯೋರ್ವ ಬಳೆಗಳನ್ನು ಎಸೆದು, ವಂದೇ ಮಾತರಂ ಘೋಷಣೆ ಕೂಗಿರುವ ಘಟನೆಯೊಂದು ಗುಜರಾತ್ ನ ಅಮ್ರೇಲಿ ಜಿಲ್ಲೆಯಲ್ಲಿ ನಡೆದಿದೆ.
ಕೇಂದ್ರದ ಎನ್'ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಸಂಭ್ರಮಾಚರಣೆಯ ಅಂಗವಾಗಿ ನಿನ್ನೆ ಸಂಜೆ ಸಾರ್ವಜನಿಕ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನುದ್ದೇಶಿಸಿ ಸಚಿವೆ ಸ್ಮೃತಿ ಇರಾನಿ ಮಾತನಾಡುತ್ತಿದ್ದರು. ಈ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಕೇತನ್ ಕಸ್ವಾಲ್ ಎಂಬ ವ್ಯಕ್ತಿ ಇರಾನಿಯವರನ್ನು ಗುರಿಯಾಗಿರಿಸಿಕೊಂಡು ಏಕಾಏಕಿ ಬಳೆಗಳನ್ನು ಎಸೆದಿದ್ದಾರೆ.
ಕೇತನ್ ಸುಮಾರು 2-3 ಮೂರು ಬಳೆಗಳನ್ನು ಇರಾನಿಯವರತ್ತ ಎಸೆದಿದ್ದಾನೆ. ಬಳೆಗಳು ಸಚಿವರಿದ್ದ ವೇದಿಕೆಯಿಂದ ಕೊಂಚ ದೂರತದಲ್ಲಿ ಬಿದ್ದಿದೆ. ಬಳೆ ಎಸೆಯುತ್ತಿದ್ದಂತೆಯೇ ಸ್ಥಳದಲ್ಲಿದ್ದ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಚಿವೆ ಇರಾನಿಯವರು ಮಾತನಾಡಲು ಆರಂಭಿಸುತ್ತಿದ್ದಂತೆಯೇ ವೇದಿಕೆಯಿಂದ ದೂರದಲ್ಲಿ ಕುಳಿತಿದ್ದ ಕೇತನ್ ಇದ್ದಕ್ಕಿದ್ದಂತೆಯೇ ಸಚಿವೆ ಮೇಲೆ 2-3 ಬಳೆಗಳನ್ನುಎಸೆದ. ನಂತರ ವಂದೇ ಮಾತರಂ ಎಂದು ಘೋಷಣೆ ಕೂಗಿದ. ಕೇತನ್ ಬಹಳ ಹಿಂದಿನಿಂದ ಬಳೆಗಳನ್ನು ಎಸೆದ ಪರಿಣಾಮ ಬಳೆಗಳು ಸಚಿವೆ ಮೇಲೆ ಬೀಳಲಿಲ್ಲ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು ಎಂದು ಪೊಲೀಸ್ ಅಧಿಕಾರಿ ಜಗದೀಶ್ ಪಟೇಲ್ ಅವರು ಹೇಳಿದ್ದಾರೆ.
ಆರೋಪಿ ಕೇತನ್ ಕಾಂಗ್ರೆಸ್ ಆಗಲೀ ಅಥವಾ ಇನ್ನಾವುದೇ ಪಕ್ಷ, ಸಂಘಟನೆಗಳಿಗೆ ಸೇರಿದವನಲ್ಲ. ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಿ ವಂದೇ ಮಾತರಂ ಎನ್ನುತ್ತಾ ಸಚಿವೆ ಮೇಲೆ ಬಳೆಗಳನ್ನು ಎಸೆದಿದ್ದಾರೆಂದು ಪಟೇಲ್ ಅವರು ತಿಳಿಸಿದ್ದಾರೆ.