ವಿಶಾಖಪಟ್ಟಣ: ತಾವು ಯಾವುದೇ ತಪ್ಪು ಮಾಡಿಲ್ಲ ಹೀಗಾಗಿ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದು ವಿಮಾನಯಾನ ಸಂಸ್ಥೆಗಳಿಂದ ನಿಷೇಧಕ್ಕೆ ಒಳಗಾಗಿರುವ ಟಿಡಿಪಿ ಸಂಸದ ಜೆಸಿ ದಿವಾಕರ್ ರೆಡ್ಡಿ ಹೇಳಿದ್ದಾರೆ.
ವಿಶಾಖಪಟ್ಟಣಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದಿವಾಕರ್ ರೆಡ್ಡಿ ಅವರು, ನಾನು ಯಾರನ್ನೂ ನಿಂದಿಸಿಲ್ಲ, ಯಾರ ಮೇಲೂ ಹಲ್ಲೆ ಮಾಡಿಲ್ಲ. ಹೀಗಿರುವಾಗ ಕ್ಷಮೆ ಏಕೆ ಕೇಳಬೇಕು ಎಂದು ಹೇಳಿದ್ದಾರೆ. ಅಂತೆಯೇ ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ದಿವಾತರ್ ರೆಡ್ಡಿ ನಿರಾಕರಿಸಿದ್ದಾರೆ.
ವಿಜಯವಾಡದಿಂದ ಹೈದರಾಬಾದ್‌ಗೆ ಇಂಡಿಗೋ ಏರ್‌ಲೈನ್ಸ್ ಗುರುವಾರ ಬೆಳಗ್ಗೆ ಹೊರಡಬೇಕಿತ್ತು. ಸಾಮಾನ್ಯವಾಗಿ ವಿವಿಐಪಿಗಳು ವಿಮಾನ ಪ್ರಯಾಣ ಮಾಡುವಾಗ ಅವರ ಆಪ್ತ ಸಹಾಯಕರು ಬಂದು ಬೋರ್ಡಿಂಗ್ ಪಾಸ್ ಪಡೆದುಕೊಳ್ಳುತ್ತಾರೆ. ಗಣ್ಯರು ಬರುತ್ತಿದ್ದಾರೆ ಎಂಬ ಮಾಹಿತಿಯನ್ನು ವಿಮಾನ ಸಿಬ್ಬಂದಿಗೂ ತಿಳಿಸುತ್ತಾರೆ. ಆದರೆ ದಿವಾಕರ ರೆಡ್ಡಿ ಅವರಿಂದ ಅಂತಹ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ದೇಶೀಯ ವಿಮಾನದಲ್ಲಿ ಪ್ರಯಾಣಿಸುವವರು ವಿಮಾನ ಹೊರಡುವುದಕ್ಕಿಂತ 45 ನಿಮಿಷ ಮುಂಚಿತವಾಗಿ ಬಂದಿರಬೇಕು. ಆದರೆ ಜೆ.ಸಿ. ದಿವಾಕರ ರೆಡ್ಡಿ ಅವರು ವಿಮಾನ ಇನ್ನೇನು ಟೇಕಾಫ್ ಆಗಲು 28 ನಿಮಿಷಗಳು ಇವೆ ಎನ್ನುವಾಗ ವಿಮಾನ ನಿಲ್ದಾಣ ಪ್ರವೇಶಿಸಿದರು. ಬೋರ್ಡಿಂಗ್ ಪಾಸ್ ಕೊಡಲು ಸಿಬ್ಬಂದಿ ನಿರಾಕರಿಸಿದಾಗ ವಾಚಾಮಗೋಚರವಾಗಿ ನಿಂದಿಸಿ, ದಾಂಧಲೆಗೆ ಇಳಿದರು.
ಇದೇ ವಿಚಾರವಾಗಿ ಬಹುತೇಕ ಎಲ್ಲ ವಿಮಾನಯಾನ ಸಂಸ್ಥೆಗಳು ದಿವಾಕರ್ ರೆಡ್ಡಿ ಅವರ ವಿಮಾನಯಾನ ಪ್ರಯಾಣಕ್ಕೆ ನಿಷೇಧ ಹೇರಿವೆ.