ಇಸ್ಲಾಮಾಬಾದ್: ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣ ಸಂಬಂಧ ಭಾರತದ ಮನವಿಗಳನ್ನು ಅಂತರಾಷ್ಟ್ರೀಯ ನ್ಯಾಯಾಲಯದ ಎಂದಿಗೂ ತಿರಸ್ಕರಿಸಿಲ್ಲ ಎಂದು ಭಾರತ ಶನಿವಾರ ಸ್ಪಷ್ಟಪಡಿಸಿದೆ.
ನಿನ್ನೆಯಷ್ಟೇ ಪಾಕಿಸ್ತಾನ ಮಾಧ್ಯಮಗಳು ಕೆಲ ವರದಿಗಳನ್ನು ಪ್ರಕಟಿಸಿದ್ದವು. ಜಾಧವ್ ಅವರ ವಿರುದ್ಧದ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ ವರೆಗೆ ಮುಂದೂಡುವಂತೆ ಭಾರತ ಮಾಡಿದ್ದ ಮನವಿಯನ್ನು ಅಂತರಾಷ್ಟ್ರೀಯ ನ್ಯಾಯಾಲಯ ತಿರಸ್ಕರಿಸಿದ್ದು, ಭಾರತಕ್ಕೆ ಹಿನ್ನಡೆಯುಂಟಾಗಿದೆ ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿತ್ತು.
ಪಾಕಿಸ್ತಾನದ ಹೇಳಿಕೆಯನ್ನು ಭಾರತ ಇದೀಗ ತಿರಸ್ಕರಿಸಿದೆ. ಈ ಕುರಿತಂತೆ ಸ್ಫಷ್ಟನೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಗೋಪಾಲ್ ಬಾಗ್ಲೆಯವರು, ಜಾಧವ್ ಪ್ರಕರಣ ಸಂಬಂಧ ಅಂತರಾಷ್ಟ್ರೀಯ ನ್ಯಾಯಾಲಯ ಮುಖ್ಯಸ್ಥರೀ ಭಾರತ ಹಾಗೂ ಪಾಕಿಸ್ತಾನ ಎರಡೂ ದೇಶಗಳ ಪ್ರತಿನಿಧಿಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಚರ್ಚೆ ಬಳಿಕ ಅರ್ಜಿ ಸಲ್ಲಿಸಲು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿತ್ತು. ಸೆಪ್ಟಂಬರ್ 13ರೊಳಗಾಗಿ ಹಾಗೂ ಪಾಕಿಸ್ತಾನಕ್ಕೆ ಡಿಸೆಂಬರ್ 13ರೊಳಗಾಗಿ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಿತ್ತು. ವಾಸ್ತವಿಕ ಅಂಶ ಇದಾಗಿದ್ದು, ಪ್ರಸ್ತುತ ಜಾಧವ್ ಪ್ರಕರಣ ಸಂಬಂಧ ಬರುತ್ತಿರುವ ವರದಿಗಳು ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ನ್ಯಾಯಾಲಯದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುವ ವೇಳೆ ಭಾರತವೇ 4 ತಿಂಗಳು ಕಾಲಾವಕಾಶ ನೀಡುವಂತೆ ಮನವಿ ಮಾಡಿತ್ತು. ಉಭಯ ರಾಷ್ಟ್ರಗಳು ಅರ್ಜಿಗಳನ್ನು ಸಲ್ಲಿಸಿದ ಬಳಿಕವಷ್ಟೇ ನ್ಯಾಯಾಲಯ ಅಂತಿಮ ಆದೇಶ ಹೊರಡಿಸಲು ಸಾಧ್ಯ. ಜನವರಿ ತಿಂಗಳಿನಲ್ಲಿ ನ್ಯಾಯಾಲಯ ವಿಚಾರಣೆ ನಡೆಸುತ್ತದೆಯೋ, ಇಲ್ಲವೋ ಎಂಬುದು ನ್ಯಾಯಾಲಯಕ್ಕೆ ಬಿಟ್ಟಿದ್ದು. ಅರ್ಜಿ ಪರಿಶೀಲನೆ ನಡೆಸಿದ ಬಳಿಕ ನ್ಯಾಯಾಲಯವೇ ಈ ಕುರಿತಂತೆ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.