ದೇಶ

ಬಿಹಾರ ರಾಜ್ಯಪಾಲ ಹುದ್ದೆಗೆ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ರಾಜಿನಾಮೆ

Srinivasamurthy VN

ನವದೆಹಲಿ: ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಅವರು ತಮ್ಮ ಬಿಹಾರದ ರಾಜ್ಯಪಾಲ ಹುದ್ದೆಗೆ ಮಂಗಳವಾರ ರಾಜಿನಾಮೆ ನೀಡಿದ್ದಾರೆ.

ಮಂಗಳವಾರ ಮಧ್ಯಾಹ್ನ ದೆಹಲಿಗೆ ತೆರಳಿದ್ದ ರಾಮನಾಥ್ ಕೋವಿಂದ್ ಅವರು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ ತಮ್ಮ ರಾಜಿನಾಮೆ ಸಲ್ಲಿಕೆ ಮಾಡಿದ್ದು, ಪ್ರಣಬ್ ಮುಖರ್ಜಿ ಅವರು ಕೋವಿಂದ್ ಅವರ  ರಾಜಿನಾಮೆಯನ್ನು ಅಂಗೀಕರಿಸಿದ್ದಾರೆ ಎಂದು ತಿಳಿದುಬಂದಿದೆ.

ಏತನ್ಮಧ್ಯೆ ಪ್ರಣಬ್ ಮುಖರ್ಜಿ ಅವರು ರಾಮನಾಥ್ ಕೋವಿಂದ್ ಅವರಿಗೆ ಶುಭಾಷಯ ತಿಳಿಸಿದ್ದು, ಉಭಯ ನಾಯಕರು ಕೆಲ ಸಮಯ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ರಾಮನಾಥ್ ಕೋವಿಂದ್ ಅವರ ರಾಜಿನಾಮೆಯಿಂದ ತೆರವಾಗಿರುವ ಬಿಹಾರ ರಾಜ್ಯಪಾಲ ಹುದ್ದೆಯ ಜವಾಬ್ದಾರಿಯನ್ನು ಪಶ್ಚಿಮ ಬಂಗಾಳ ರಾಜ್ಯಪಾಲ ಕೇಶರಿನಾಥ್ ತ್ರಿಪಾಠಿ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ ಎಂದು  ರಾಷ್ಟ್ರಪತಿ ಭವನದ ಮೂಲಗಳು ತಿಳಿಸಿವೆ.

ನಿನ್ನೆಯಷ್ಟೇ ಬಿಜೆಪಿ 71 ವರ್ಷದ ರಾಮನಾಥ್ ಕೋವಿಂದ್ ಅವರನ್ನು ಎನ್ ಡಿಎ ಮೈತ್ರಿಕೂಟದ ರಾಷ್ಟ್ರಪತಿ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಮುಂಬರುವ ಜುಲೈ 17ರಂದು ರಾಷ್ಟ್ರಪತಿ ಹುದ್ದೆಗಾಗಿ ಚುನಾವಣೆ ನಡೆಯಲಿದೆ.  ಜುಲೈ 24ರಂದು ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ.

SCROLL FOR NEXT