ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್
ಅಮೃತಸರ: ಪಂಜಾಬ್ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಚುನಾವಣಾಪೂರ್ವ ಭರವಸೆಯನ್ನು ಈಡೇರಿಸಿದ್ದು, ರೂ.10 ಲಕ್ಷ ರೈತರ ಕೃಷಿ ಸಾಲ ಮನ್ನಾ ಮಾಡುವುದಾಗಿ ಸೋಮವಾರ ಘೋಷಣೆ ಮಾಡಿದೆ.
ಉತ್ತರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ಪಂಜಾಬ್ ರಾಜ್ಯ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಸಣ್ಣ ಮತ್ತು ಮಧ್ಯಮ ರೈತರ ರೂ.2ಲಕ್ಷ ವರೆಗಿನ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಲು ನಿರ್ಧಾರ ಕೈಗೊಂಡಿದೆ. ಅಲ್ಲದೆ, ದೊಡ್ಡ ಹಿಡುವಳಿದಾರರ ಸಾಲ ಕೂಡ ರೂ.2 ಲಕ್ಷ ರಷ್ಟು ಮಾಫಿಯಾಗಲಿದೆ. ಇದರೊಂದಿಗೆ ಕರ್ನಾಟಕದಲ್ಲೂ ಕೃಷಿ ಸಾಲ ಮನ್ನಾ ಕುರಿತು ಒತ್ತಡ ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿ ಬರತೊಡಗಿವೆ.
ಪಂಜಾಬ್ ವಿಧಾನಸಭೆಯಲ್ಲಿ ಸಾಲ ಮನ್ನಾ ನಿರ್ಧಾರ ಪ್ರಕಟಿಸಿರುವ ಅಮರೀಂದರ್ ಸಿಂಗ್ ಅವರು, ಸರ್ಕಾರದ ಈ ನಡೆಯಿಂದ 5 ಎಕರೆವರೆಗೆ ಜಮೀನು ಹೊಂದಿರುವ 8.75 ಲಕ್ಷ ರೈತರು ಸೇರಿದಂತೆ ರಾಜ್ಯದ ಒಟ್ಟು 10.25 ಲಕ್ಷ ರೈತರ ಸಾಲ ಹೊರೆ ಇಳಿಯಲಿದೆ. ಆರ್ಥಿಕ ತಜ್ಞರಾಗಿರುವ ಟಿ ಹಕ್ ನೇತೃತ್ವದ ತಜ್ಞರ ಸಮಿತಿ ನೀಡಿರುವ ಮಧ್ಯಂತರ ವರದಿಯನ್ನು ಆಧರಿಸಿ ಸಾಲ ಮನ್ನಾ ಕುರಿತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳ ಖಾಸಗಿ ಹಣಕಾಸು ಸಂಸ್ಥೆಗಳಿಂದ ಮಾಡಿದ್ದ ಸಾಲವನ್ನೂ ಕೂಡ ಮನ್ನಾ ಮಾಡಲಾಗುತ್ತದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ಸದಸ್ಯರಿಗೆ ಪರಿಹಾರವನ್ನು ರೂ.3 ಲಕ್ಷದಿಂದ ರೂ.5 ಲಕ್ಷದವರೆಗೂ ಏರಿಸಲು ನಿರ್ಧಾರ ಕೈಗೊಳ್ಳಲಾಗಿದೆ. ಖಾಸಗಿ ಹಣಕಾಸು ಸಂಸ್ಥೆಗಳಿಂದ ರೈತರು ಪಡೆದ ಸಾಲವನ್ನು ಮನ್ನಾ ಮಾಡುವ ಸಂಬಂಧ ಸರ್ಕಾರ ಪಂಜಾಬ್ ಕೃಷಿ ಋುಣಭಾರ ಒಪ್ಪಂದ ಕಾಯ್ದೆಗೆ ತಿದ್ದುಪಡಿ ತರಲಿದೆ ಎಂದು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ರೈತರ ರೂ.36,000 ಕೋಟಿ ಮತ್ತು ಮಹಾರಾಷ್ಟ್ರ ಸರ್ಕಾರ ರೂ.30,000 ಕೋಟಿ ಸಾಲ ಮನ್ನಾ ಮಾಡಿತ್ತು. ಆದರೆ, ಎಲ್ಲಾ ರೈತರಿಗೂ ಈ ಯೋಜನೆ ವಿಸ್ತರಿಸದೇ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದ್ದು. ಈ ನಡುವೆ ಮಧ್ಯಪ್ರದೇಶದಲ್ಲೂ ಸಾಲ ಮನ್ನಾಕ್ಕೆ ಆಗ್ರಹಿಸಿ ಹಿಂಸಾಚಾರಗಳು ಭುಗಿಲೆದ್ದಿವೆ.