ಎನ್'ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್
ನವದೆಹಲಿ: ಎನ್'ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮನಾಥ್ ಕೋವಿಂದ್ ಗೆ ಶಿವಸೇನೆ ಅಧ್ಯಕ್ಷ ಉದ್ಧವ್ ಠಾಕ್ರೆ ಮಂಗಳವಾರ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗೆ ಎನ್ ಡಿಎ ಸರ್ಕಾರ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತಿದ್ದಂತೆಯೇ ಬೆಂಬಲ ವ್ಯಕ್ತಪಡಿಸಲು ಈ ಹಿಂದೆ ಶಿವಸೇನೆ ಅನುಮಾನ ಮಾಡಿತ್ತು. ಇದೀಗ ಶಿವಸೇನೆ ಬೆಂಬಲ ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಬಿಜೆಪಿಗೆ ಬಲ ಹೆಚ್ಚಾಗದಂತಾಗಿದೆ.
ರಾಷ್ಟ್ರಪತಿ ಅಭ್ಯರ್ಥಿಗೆ ಕೋವಿಂದ್ ಅವರನ್ನು ಆಯ್ಕೆ ಮಾಡಿರುವುದರ ಕುರಿತಂತೆ ನಿನ್ನೆ ಮುಂಬೈನಲ್ಲಿ ಮಾತನಾಡಿರುವ ಠಾಕ್ರೆಯವರು, ಕೋವಿಂದ್ ಅವರಿಗೆ ನಾವು ಬೆಂಬಲ ವ್ಯಕ್ತಪಡಿಸುತ್ತಿದ್ದೇವೆಂದು ಕೋವಿಂದ್ ಅವರು ಉತ್ತಮ ವ್ಯಕ್ತಿತ್ವವುಳ್ಳ ವ್ಯಕ್ತಿಯಾಗಿದ್ದು, ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡಿದ್ದಾರೆಂದು ಹೇಳಿದ್ದಾರೆ.
ಶಿವಸೇನೆ ಜೊತೆಗೆ ಸಮಾಜವಾದಿ ಪಕ್ಷ, ಬಿಜೆಡಿ, ಟಿಆರ್'ಎಸ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಕೋವಿಂದ್ ಅವರ ಆಯ್ಕೆ ಬಹುತೇಕ ಖಚಿವಾಗಿದೆ. ವಿವಿಧ ಪಕ್ಷಗಳ ಬೆಂಬಲದಿಂದಾಗಿ ವಿರೋಧ ಪಕ್ಷಗಳಲ್ಲಿ ಒಡಕು ಮೂಡಿದಂತಾಗಿದೆ. ಇನ್ನು ಅಣ್ಣಾ ಡಿಎಂಕೆ ನಿರ್ಣಯದ ಹೊಣೆಯನ್ನು ಶಶಿಕಲಾಗೆ ಬಿಡಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಠಾಕ್ರೆಯವರು, ರಾಷ್ಟ್ರಪತಿ ಚುನಾವಣೆಯಲ್ಲಿ ಶಿವಸೇನೆಗೆ ಯಾವುದೇ ಆಸಕ್ತಿಯಿಲ್ಲ. ಆದರೆ, ದಲಿತ ಸಮುದಾಯವೆಂಬ ಕಾರಣಕ್ಕೆ ರಾಷ್ಟ್ರಪತಿ ಆಭ್ಯರ್ಥಿಯಾಗಿ ರಾಮನಾಥ ಅವರನ್ನು ಬಿಜೆಪಿ ಆಯ್ಕೆ ಮಾಡಿರುವುದೇ ಆದರೆ, ವೋಟ್ ಬ್ಯಾಂಕ್ ಗಾಗಿ ಮಾಡಿದೆ ಎಂದು ಹೇಳಬಹುದು. ಇಡೀ ದೇಶದ ಹಿತಾಸಕ್ತಿಗೆ ಅನುಗುಣವಾಗಿ ರಾಷ್ಟ್ರಪತಿ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಶಿವಸೇನ ಈ ರಾಷ್ಟ್ರಪತಿ ಅಭ್ಯರ್ಥಿಗೆ ಆರ್'ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಸೂಚಿಸಿತ್ತು. ಹಿಂದೂ ರಾಷ್ಟ್ರವಾಗಿರುವ ಕಾರಣಕ್ಕೆ ಭಾಗವತ್ ಅವರ ಹೆಸರನ್ನು ನೀಡಲಾಗಿತ್ತು. ವಿಜ್ಞಾನಿ ಡಾ.ಎಂ.ಎಸ್ ಸ್ವಾಮಿನಾಥನ್ ಅವರೂ ಕೂಡ ಉತ್ತಮವಾದ ಅಭ್ಯರ್ಥಿಯಾಗಿದ್ದರು. ಹಸಿರು ಕ್ರಾಂತಿಗಾಗಿ ಅವರು ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics