ಬಾಲಕಿಯ ಕಿವಿ ಕತ್ತರಿಸಿದ ಆರೋಪಿ ಅಮ್ರಿತ್ ಬಹದ್ದೂರ್
ನವದೆಹಲಿ: ದೆವ್ವ ಬೆದರಿಸಿತೆಂದು ಹೇಳಿ ತಂದೆಯೊಬ್ಬ ಮೂರು ವರ್ಷದ ಮಗಳ ಮೇಲೆ ಕಿವಿಯನ್ನೇ ಕತ್ತರಿಸಿರುವ ವಿಚಿತ್ರ ಘಟನೆಯೊಂದು ರಾಜಧಾನಿ ದೆಹಲಿಯ ಜಿಟಿಬಿ ಎನ್ ಕ್ಲೇವ್'ನಲ್ಲಿ ನಡೆದಿದೆ.
ಅಮ್ರಿತ್ ಬಹದ್ದೂರ್ (35) ಬಾಲಕಿಯ ಕಿವಿ ಕತ್ತರಿಸಿದ ತಂದೆಯಾಗಿದ್ದಾನೆ. ಘಟನೆ ಬಳಿಕ ಪೊಲೀಸರು ಅಮ್ರಿತ್ ನನ್ನು ಬಂಧನಕ್ಕೊಳಪಡಿಸಿದ್ದು, ದೆವ್ವದ ಬೆದರಿದ ಕಾರಣಕ್ಕೆ ಮಗಳ ಕಿವಿ ಕತ್ತರಿಸಿದ್ದಾಗಿ ವಿಚಾರಣೆ ವೇಳೆ ಅಮ್ರಿತ್ ಹೇಳಿಕೊಂಡಿದ್ದಾನೆ.
ಘಟನೆ ಕುರಿತಂತೆ ಮಾತನಾಡಿರುವ ಅಮ್ರಿತ್ ಕುಟುಂಬಸ್ಥರು, ಕೆಲ ತಿಂಗಳ ಹಿಂದಷ್ಟೇ ಒಂದೂವರೆ ವರ್ಷದ ಮಗಳು ತೀರಿಕೊಂಡ ಬಳಿಕ ಅಮ್ರಿತ್ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ. ಮಗಳ ಸಾವಿನ ಬಳಿಕ ನಿನ್ನ ಮತ್ತೊಬ್ಬಳು ಮಗಳನ್ನು ಕೂಡ ಬಲಿ ಪಡೆಯುತ್ತೇನೆಂದು ದೆವ್ವವೊಂದು ಬೆದರಿಕೆ ಹಾಕುತ್ತಿದೆ ಎಂದು ಅಮ್ರಿತ್ ಕೆಲ ದಿನಗಳಿಂದ ಭಯದಿಂದ ಹೇಳುತ್ತಿದ್ದ ಎಂದು ಹೇಳಿದ್ದಾರೆ.
ಕ್ಲೀನರ್ ಆಗಿ ಕೆಲಸ ಮಾಡಿಕೊಂಡಿರುವ ಬಹದ್ದೂರ್ ಗುರುವಾರ ಬೆಳಗಿನ ಜಾವ 1.30ರ ಸುಮಾರಿಗೆ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿದ್ದ ಅಮ್ರಿತ್ ಗೆ ಭೂತವೊಂದು ತಾನು ಹೇಳಿದಂತೆ ಮಾಡದೇ ಹೋದರೆ, ಮತ್ತೊಬ್ಬಳು ಮಗಳನ್ನು ಬಲಿ ಪಡೆಯುತ್ತೇನೆಂದು ಬೆದರಿಕೆ ಹಾಕಿದ್ದು, ಈ ಕಾರಣದಿಂದ ಮಗಳ ಕಿವಿಯನ್ನು ಕತ್ತರಿಸಿದ್ದಾನೆಂದು ತಿಳಿಸಿದ್ದಾರೆ.
ಕಿವಿ ಕತ್ತರಿಸುತ್ತಿದ್ದಂತೆಯೇ ಬಾಲಕಿ ಚೀರುತ್ತಿರುವ ಶಬ್ಧ ಕೇಳಿ ಬಂದಿದೆ. ಕೂಡಲೇ ಎಚ್ಚರಗೊಂಡ ಕುಟುಂಬಸ್ಥರು, ನೆರೆಹೊರೆಯವರನ್ನು ಕೂಗಿ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಬಂದಿರುವ ಪೊಲೀಸರು ಬಾಲಕಿಯನ್ನು ರಕ್ಷಣೆ ಮಾಡಿದ್ದಾರೆ.
ಅಮ್ರಿತ್ ಕಿವಿ ಕತ್ತರಿಸಲು ಮುಂದಾಗುತ್ತಿದ್ದಂತೆಯೇ ಪತ್ನಿ ಆತನನ್ನು ತಡೆದಿದ್ದಾನೆ. ಈ ವೇಳೆ ಪತ್ನಿಯನ್ನು ಹೊಡೆದ ಅಮ್ರಿತ್ ದೂರ ಹೋಗುವಂತೆ ತಿಳಿಸಿದ್ದಾನೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಸ್ತುತ ಬಾಲಕಿ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆಂದು ಅಧಿಕಾರಿಗಳು ತಿಳಿಸಿದ್ದಾರೆ.
7 ವರ್ಷಗಳ ಹಿಂದೆ ಅಮ್ರಿತ್ ಹಿರಿಯ ಸಹೋದರ ಕೂಡ ಮೃತಪಟ್ಟಿದ್ದ. ಸಹೋದರನಿಗೆ ನಾಲ್ಕು ಮಕ್ಕಳಿದ್ದು, ವಿಧವೆಯಾಗಿದ್ದ ತನ್ನ ಅತ್ತಿಗೆಯನ್ನೇ ಅಮ್ರಿತ್ ವಿವಾಹವಾಗಿದ್ದ.