ಕೋಲ್ಕತ್ತಾ: ರಾಷ್ಟ್ರದಲ್ಲೇ ಮೊದಲು ಮೆಟ್ರೋ ಸೇವೆ ಪಡೆದ ನಗರ ಎಂಬ ಖ್ಯಾತಿ ಪಡೆದಿದ್ದ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದ್ದು, ನೀರಿನಾಳದ ಮೆಟ್ರೋ ರೈಲು ಮಾರ್ಗ ಹೊಂದಿದ ಮೊದಲ ನಗರ ಎಂಬ ಖ್ಯಾತಿ ಗಳಿಸಿದೆ.
ಮೆಟ್ರೋ ಸಂಚಾರಕ್ಕಾಗಿ ನೀರಿನಡಿ ಯಲ್ಲಿ ಸುರಂಗ ಮಾರ್ಗ ಹೊಂದಿದ ಮೊದಲ ನಗರವಾಗಿ ಕೋಲ್ಕತ್ತಾ ಹೊರಹೊಮ್ಮಿದ್ದು, ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಮತ್ತು ಹೌರಾ ನಗರಗಳ ನಡುವಿನ ಮೆಟ್ರೋ ರೈಲು ಸಂಪರ್ಕಕ್ಕಾಗಿ ಹೂಗ್ಲಿ ನದಿಯಲ್ಲಿ ಕೈಗೊಳ್ಳಲಾಗಿದ್ದ ಸುರಂಗ ಮಾರ್ಗ ನಿರ್ಮಾಣ ಶುಕ್ರವಾರ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಮಾರು 9 ಸಾವಿರ ಕೋಟಿ ರು. ವೆಚ್ಚದಲ್ಲಿ 16.4 ಕಿ.ಮೀ ಸುರಂಗ ಮಾರ್ಗ ಕೊರೆಯಲಾಗಿದ್ದು, ನೀರಿನಡಿಯ ಎರಡು ಸುರಂಗ ಮಾರ್ಗಗಳು 13 ಮೀಟರ್ ನೀರಿನ ಕೆಳಗೆ ಮತ್ತು ಭುವಿಯಿಂದ 30 ಮೀಟರ್ ಕೆಳಗಿವೆ ಎಂದು ತಿಳಿದುಬಂದಿದೆ.
ಸಾಲ್ಟ್ ಲೇಕ್ ಮತ್ತು ಫುಲ್ ಬಾಗನ್ ನಡುವಿನ ಮೊದಲ ಹಂತದ ಮೆಟ್ರೊ ಸಂಚಾರವು ಮುಂದಿನ ವರ್ಷ ಕಾರ್ಯಾರಂಭ ಮಾಡಲಿದ್ದು, ದೂರದ ನಗರಗಳ ಸಂಪರ್ಕಕ್ಕಾಗಿ ಬಹು ಮುಖ್ಯವಾದ ಈ ಸುರಂಗ ಮಾರ್ಗ ಕಾಮಗಾರಿಯನ್ನು ಕೋಲ್ಕತ್ತಾ ಮೆಟ್ರೋ ರೈಲು ನಿಗಮ ಕೈಗೊಂಡಿತ್ತು.