ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್
ಮುಂಬೈ: ಮಹಾರಾಷ್ಟ್ರ ರಾಜ್ಯ ಸರ್ಕಾರ ರೈತರಿಗೆ ಅತಿದೊಡ್ಡ ಸಿಹಿ ಸುದ್ದಿ ನೀಡಿದೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ 34,000 ಕೋಟಿ ರೂಪಾಯಿಗಳಷ್ಟು ಕೃಷಿ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ರೈತರಿಗೆ 1.5 ಲಕ್ಷದವರೆಗೆ ಕೃಷಿ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ತಿಳಿಸಿದ್ದಾರೆ. ಇದರಿಂದ ರಾಜ್ಯದ 89 ಲಕ್ಷ ರೈತರಿಗೆ ಪ್ರಯೋಜನವಾಗಲಿದೆ.
ತಮ್ಮ ಸಾಲವನ್ನು ನಿಗದಿತ ಸಮಯದೊಳಗೆ ಸರಿಯಾಗಿ ಪಾವತಿಸಿಕೊಂಡು ಬಂದ ರೈತರ ಸಾಲದಲ್ಲಿ ಶೇಕಡಾ 25ರಷ್ಟನ್ನು ರಾಜ್ಯ ಸರ್ಕಾರ ಮನ್ನಾ ಮಾಡಲಿದೆ ಎಂದು ಹೇಳಿದರು.
ರೈತರ ಕೃಷಿ ಸಾಲ ಮನ್ನಾ ಮಾಡುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುವುದರಿಂದ ಎಲ್ಲಾ ಸಚಿವರು ಮತ್ತು ಶಾಸಕರು ತಮ್ಮ ಒಂದು ತಿಂಗಳ ವೇತನವನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.
ರೈತರ ಸಾಲ ಮನ್ನಾ ಮಾಡುವ ರಾಜ್ಯ ಮಹಾರಾಷ್ಟ್ರ ಮೊದಲೇನಲ್ಲ. ಈ ಹಿಂದೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, 5 ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿದ ಸಣ್ಣ ಮತ್ತು ಅತಿಸಣ್ಣ ರೈತರ ಬೆಳೆ ಸಾಲವನ್ನು 2 ಲಕ್ಷದವರೆಗೆ ಮನ್ನಾ ಮಾಡುವುದಾಗಿ ಘೋಷಿಸಿದ್ದರು.