ಅಮೆರಿಕ ಸಂಸ್ಥೆಗಳ ಸಿಇಒಗಳೊಂದಿಗೆ ಪ್ರಧಾನಿ ಮೋದಿ
ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಸಂಸ್ಥೆಗಳ ಸಿಇಒಗಳೊಂದಿಗೆ ಸಂವಹನ ನಡೆಸಿದ್ದು, ಭಾರತದ ಅಭಿವೃದ್ಧಿ ಅಮೆರಿಕ ಹಾಗೂ ಭಾರತಕ್ಕೆ ಸಮಾನ ಲಾಭದ ಪಾಲುದಾರಿಕೆಗೆ ನೆರವಾಗಲಿದೆ, ಇದಕ್ಕೆ ಕೊಡುಗೆ ನೀಡಲು ಅಮೆರಿಕಾ ಸಂಸ್ಥೆಗಳಿಗೆ ಈಗ ಉತ್ತಮ ಅವಕಾಶವಿದೆ ಎಂದು ಮೋದಿ ಹೇಳಿದ್ದಾರೆ.
ಭಾರತ ಈಗ ಉದ್ಯಮ ಸ್ನೇಹಿ ಪ್ರದೇಶವಾಗಿ ಹೊರಹೊಮ್ಮುತ್ತಿದ್ದು, ಜಿಎಸ್ ಟಿ ಜಾರಿಯಿಂದ ಮತ್ತಷ್ಟು ಉದ್ಯಮ ಸ್ನೇಹಿಯಾಗಲಿದೆ, ಜಿಎಸ್ ಟಿ ಗೇಮ್ ಚೇಂಜರ್ ಆಗಲಿದ್ದು, ಭಾರತದಲ್ಲಿ ಬಂಡವಾಳ ಹೂಡಲು ಅಮೆರಿಕ ಸಂಸ್ಥೆಗಳ ಸಿಇಒಗಳಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕಳೆದ ಮೂರು ವರ್ಷಗಳಲ್ಲಿ ತಮ್ಮ ನೇತೃತ್ವದ ಎನ್ ಡಿಎ ಸರ್ಕಾರದ ನೀತಿಗಳಿಂದಾಗಿ ಭಾರತ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸಿದೆ ಎಂದಿರುವ ಪ್ರಧಾನಿ ಮೋದಿ, ಭಾರತವನ್ನು ಉದ್ಯಮ ಸ್ನೇಹಿಯನ್ನಾಗಿಸಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಹಾಗೂ ಮುಂದೆ ಕೈಗೊಳ್ಳಲಿರುವ ಕ್ರಮಗಳ ಬಗ್ಗೆ ಸಿಇಒಗಳಿಗೆ ವಿವರಿಸಿದ್ದಾರೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರ ಗೋಪಾಲ್ ಬಾಗ್ಲೆ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಆಪಲ್ ನ ಟಿಮ್ ಕುಕ್, ಮೈಕ್ರೋಸಾಫ್ಟ್ ನ ಸತ್ಯ ನಾದೆಳ್ಲಾ, ಗೂಗಲ್ ನ ಸುಂದರ್ ಪಿಚ್ಚೈ, ಅಮೇಜಾನ್ ನ ಜೆಫ್, ಬೆಝೋಸ್ ಸೇರಿದಂತೆ ಅಮೆರಿಕಾದ ಸುಮಾರು 20 ಸಂಸ್ಥೆಗಳ ಸಿಇಒಗಳೊಂದಿಗೆ ಮೋದಿ ಸಂವಹನ ನಡೆಸಿದ್ದಾರೆ. ಈ ವೇಳೆ ಭಾರತದಲ್ಲಿ ಜಾರಿಯಾಗುತ್ತಿರುವ ಜಿಎಸ್ ಟಿ ಗೇಮ್ ಚೇಂಜರ್ ಆಗಲಿದ್ದು, ಜಿಎಸ್ ಟಿ ಜಾರಿ ಅಮೆರಿಕಾದಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನದ ವಿಷಯವಾಗಲಿದೆ ಎಂದು ಮೋದಿ ಹೇಳಿದ್ದಾರೆ.