ದೇಶ

ಶ್ರೀನಗರ ಎನ್'ಕೌಂಟರ್ ಅಂತ್ಯ: 2 ಉಗ್ರರ ಹತ್ಯೆ, ಇಬ್ಬರು ಯೋಧರಿಗೆ ಗಾಯ

Manjula VN
ಶ್ರೀನಗರ: 14 ಗಂಟೆಗಳ ಸುಧೀರ್ಘ ಕಾರ್ಯಾಚರಣೆ ಬಳಿಕ ಶ್ರೀನಗರ ಎನ್ ಕೌಂಟರ್ ಅಂತ್ಯಗೊಂಡಿದ್ದು, ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಇಬ್ಬರು ಯೋಧರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. 
ಪಂಥಾ ಚೌಕ್ ಬಳಿ ಸಿಆರ್'ಪಿಎಫ್ ಯೋಧರ ಮೇಲೆ ದಾಳಿ ನಡೆಸಿದ್ದ ಉಗ್ರರು ನಂತರ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್ ನಲ್ಲಿ ಅವಿತು ಕುಳಿತಿದ್ದರು. 
ಶಾಲೆ 7 ಹಂತದ ಕಟ್ಟಡವಾಗಿದ್ದು, ಒಟ್ಟು 36 ಕೊಠಡಿಗಳಿವೆ. ಉಗ್ರರು ಅಡಗಿ ಕುಳಿತುಕೊಂಡಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಸೇನಾ ಪಡೆ ಶಾಲೆಯ ಆವರಣದ ಸುತ್ತಲೂ ಸುತ್ತುವರೆದು 14 ಗಂಟೆಗಳ ಸುಧೀರ್ಘ ಕಾರ್ಯಾಚರಣೆ ನಡೆಸಿ ಅವಿತುಕುಳಿತಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ. 
ಕಾರ್ಯಾಚರಣೆ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಯೋಧರೂ ಗಾಯಗೊಂಡಿದ್ದಾರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
ಇಂದು ಬೆಳಗ್ಗೆ 3.40ರ ಸುಮಾರಿಗೆ ನಡೆಸಲಾದ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸದೆಬಡಿಯಲಾಯಿತು. ಪ್ರಸ್ತು ಸ್ಥಳದಲ್ಲಿ ಉಗ್ರರ ವಿರುದ್ಧ ಕಾರ್ಯಾಚರಣೆ ಅಂತ್ಯಗೊಂಡಿದ್ದು, ಇನ್ನೂ ಕೆಲ ಸ್ಥಳಗಳಲ್ಲಿ ಪರಿಶೀಲನೆಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 
SCROLL FOR NEXT