ಶ್ರೀನಗರ: ಹಿಂದುಗಳ ಪವಿತ್ರ ಯಾತ್ರೆಗಳಲ್ಲಿ ಒಂದಾಗಿರುವ ಅಮರನಾಥ ಯಾತ್ರೆ ಜೂ.28 ರಿಂದ ಆರಂಭವಾಗಿದ್ದು, ಯಾತ್ರಾರ್ಥಿಗಳು ಹಾಗೂ ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆಂದು ಗುಪ್ತಚರ ಇಲಾಖೆ ಬುಧವಾರ ಎಚ್ಚರಿಕೆ ನೀಡಿದೆ.
ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿರುವ ಹಿನ್ನಲೆಯಲ್ಲಿ ಯಾತ್ರೆಗೆ ಈ ಹಿಂದೆಂದೂ ಕಂಡರಿಯದ ಪ್ರಮಾಣದಲ್ಲಿ ಬಹು ಸುತ್ತಿನ ಭಾರೀ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.
ಸುಮಾರು 100ರಿಂದ 150 ಯಾತ್ರಾರ್ಥಿಗಳು ಮತ್ತು 100 ಪೊಲೀಸ್ ಸಿಬ್ಬಂದಿಯ ಹತ್ಯೆ ಮಾಡಲು ಉಗ್ರರು ಸಂಚು ರೂಪಿಸಿದ್ದಾರೆಂದ ಗುಪ್ತಚರ ಇಲಾಖೆ ಮಾಹಿತಿ ಅಂತನಾಗ್ ಎಸ್ಎಸ್ ಪಿಯವರಿಂದ ಲಭ್ಯವಾಗಿದೆ ಎಂದು ಕಾಶ್ಮೀರ ವಲಯದ ಐಜಿಪಿ ಮುನೀರ್ ಖಾನ್ ಹೇಳಿದ್ದಾರೆ.
ಈ ಕುರಿತಂತೆ ಮುನೀರ್ ಅವರು ಜಮ್ಮು ಮತ್ತು ಕಾಶ್ಮೀರದ ಡಿಐಜಿ, ಸೇನೆ, ಸಿಆರ್ ಪಿಎಫ್ ಗೆ ಪತ್ರ ಬರೆದಿದ್ದಾರೆಂದು ತಿಳಿದುಬಂದಿದೆ.
ಮುನೀರ್ ಅವರು ಬರೆದಿರುವ ಪತ್ರ ಇದೀಗ ಬಹಿರಂಗಗೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯಾತ್ರೆ ಹಿನ್ನಲೆಯಲ್ಲಿ ಪೊಲೀಸ್, ಸೇನೆ, ಗಡಿ ಭದ್ರತಾ ಪಡೆ, ಸಿಆರ್ ಪಿಎಫ್ ನ ಸುಮಾರು 35 ಸಾವಿರದಿಂದ 40 ಸಾವಿರ ಭದ್ರತಾ ಸಿಬ್ಬಂದಿಗಳು ಭದ್ರತೆಗೆ ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಸುಮಾರು 4 ಸಾವಿರ ಯಾತ್ರಾರ್ಥಿಗಳು ಮೊದಲ ಸುತ್ತಿನ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ.
ಈ ಕುರಿತಂತೆ ಮಾತನಡಿರುವ ಸಿಆರ್ ಪಿಎಫ್ ಪಡೆಯ ವಿಶೇಷ ಕಾರ್ಯದರ್ಶಿ ಎಸ್.ಎನ್. ಶ್ರೀವಾತ್ಸವ ಅವರು, ಸಾರ್ವಜನಿಕವಾಗಿ ಈ ವಿಚಾರ ಕುರಿತಂತೆ ಯಾವುದೇ ರೀತಿಯ ಚರ್ಚೆ ಮಾಡಲು ನಾನು ಇಚ್ಛಿಸುವುದಿಲ್ಲ. ಆದರೆ, ಪ್ರಸ್ತುತ ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ವಾತಾವರಣ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಗುಪ್ತಚರ ಇಲಾಖೆ ನೀಡಿರುವ ಮಾಹಿತಿಯನ್ವಯ ಈಗಾಗಲೇ ನಾವು ಮುಂಜಾಗ್ರತಾ ಕ್ರಮಗಳ್ನು ಕೊಂಡಿದ್ದೇವೆ. ಅಗತ್ಯ ಭದ್ರತೆಗಳನ್ನು ನೀಡಿದ್ದೇವೆಂದು ಹೇಳಿದ್ದಾರೆ.
ಯಾತ್ರೆ ನಮಗೆ ದೊಡ್ಡ ಸವಾಲಾಗಿದೆ. ಬೆದರಿಕೆ ಹಿನ್ನಲೆಯಲ್ಲಿ ಎಲ್ಲಾ ರೀತಿಯಲ್ಲಿಯೂ ಭದ್ರತೆಯನ್ನು ಒದಗಿಸಲಾಗಿದೆ. ಯಾತ್ರಾರ್ಥಿಗಳ ಕ್ಷೇಮ ನಮ್ಮ ಪ್ರಮುಖ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.
ಬಿಎಸ್ಎಫ್ ಡಿಜಿ ಕೆ.ಕೆ. ಶರ್ಮಾ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ. ಈ ವರ್ಷದ ಯಾತ್ರೆಯಲ್ಲಿ ಸಾಕಷ್ಟು ಬೆದರಿಕೆಗಳಿವೆ. ಯಾತ್ರೆಗೆ ಈಗಾಗಲೇ ಸಂಪೂರ್ಣ ಭದ್ರತೆಯನ್ನು ಒದಗಿಸಲಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಳೆದ ವರ್ಷದಂತೆಯೇ ಯಾತ್ರೆ ಶಾಂತಿಯುತವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos