ಲಖನೌ: ಐದು ವರ್ಷದ ಬಾಲಕಿ ತನ್ನ ತಾಯಿಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರಿಗೆ ತಾನು ಉಳಿತಾಯ ಮಾಡಿದ್ದ ಪಿಗ್ಗಿ ಬ್ಯಾಂಕನ್ನೇ ಲಂಚವಾಗಿ ನೀಡಲು ಮುಂದಾದ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮಾನ್ವಿ ತಾಯಿ ಸೀಮಾ ಕೌಶಿಕ್ ಅವರು ಕಳೆದ ಏಪ್ರಿಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಸಂಜೀವ್ ಕುಮಾರ್ ಅವರು ಪತ್ನಿ ಸೀಮಾ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತು ತಾಯಿ ಮನೆ ಸೇರಿದ್ದಳು. ಆದರೆ ಅಲ್ಲಿಯೂ ನೆಮ್ಮದಿಯಾಗಿರಲು ಸಂಜೀವ್ ಹಾಗೂ ಆತನ ಕುಟುಂಬದವರು ಬಿಟ್ಟಿರಲಿಲ್ಲ. ಸೀಮಾ ವಿರುದ್ಧ ಕಳವು ಹಾಗೂ ದರೋಡೆ ಪ್ರಕರಣಗಳನ್ನು ದಾಖಲಿಸಿದ್ದರು. ಇದರಿಂದ ಮನನೊಂದು ಸೀಮಾ ಆತ್ಮಹತ್ಯೆಗೆ ಶರಣಾಗಿದ್ದರು.
ತನ್ನ ತಾಯಿ ಸಾವಿಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೀಮಾ ತಂದೆ ಶಾಂತಿ ಸ್ವರೂಪ್ ರೊಂದಿಗೆ ಮಾನ್ವಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಲಂಚ ಕೊಟ್ಟರೆ ಮಾತ್ರ ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದು ಮನೆಯಲ್ಲಿ ಹಿರಿಯರು ಮಾತನಾಡುತ್ತಿರುವುದನ್ನು ಕೇಳಿಸಿಕೊಂಡ ಮಾನ್ವಿ ಕಳೆದ ಮಂಗಳವಾರ ತನ್ನ ಪಿಗ್ಗಿ ಬ್ಯಾಂಕ್ ನೊಂದಿಗೆ ಮೀರತ್ ಪೊಲೀಸ್ ಮಹಾ ನಿರ್ದೇಶಕ ರಾಮ್ ಕುಮಾರ್ ಅವರನ್ನು ಭೇಟಿ ಮಾಡಿ, ಇದನ್ನು ತೆಗೆದುಕೊಂಡು ನನ್ನ ತಾಯಿ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಮನವಿ ಮಾಡಿದ್ದಾಳೆ.
ಮುಗ್ಧ ಬಾಲಕಿಯ ಮಾತಿಗೆ ಕರಗಿದ ರಾಮ್ ಕುಮಾರ್ ಅವರು, ಈ ಪಿಗ್ಗಿ ಬ್ಯಾಂಕ್ ಅನ್ನು ಮನೆಗೆ ತೆಗೆದುಕೊಂಡು ಹೋಗು, ನಿನ್ನ ತಾಯಿ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ನಾನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ.
ವರದಿಗಳ ಪ್ರಕಾರ, ಐದು ವರ್ಷಗಳ ಹಿಂದೆ ಮಾನ್ವಿ ತಾಯಿ ಸೀಮಾ ಅವರು ಸಂಜೀವ್ ಕುಮಾರ್ ಅವರೊಂದಿಗೆ ಮದುವೆಯಾಗಿದ್ದರು. ಮದುವೆ ನಂತರ ಸಂಜೀವ್ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ತವರು ಮನೆ ಸೇರಿದ್ದಳು ಎನ್ನಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos