ದೇಶ

ಚೀನಾ ಕ್ರಮಗಳಿಂದ ಭದ್ರತೆಯ ಮೇಲೆ ಗಂಭೀರ ಪರಿಣಾಮ: ಭಾರತ

Srinivas Rao BV
ನವದೆಹಲಿ: ಸಿಕ್ಕಿಂ ನ ಗಡಿ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡುತ್ತಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತ, ಚೀನಾದ ಕ್ರಮ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಚೀನಾ ಸೇನಾ ಪಡೆ ಭಾರತದ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದಿರುವ ವಿದೇಶಾಂಗ ಸಚಿವಾಲಯ ಯಥಾಸ್ಥಿತಿಯನ್ನು ಬದಲಾವಣೆ ಮಾಡದಂತೆ ಚೀನಾಗೆ ಆಗ್ರಹಿಸಿರುವುದಾಗಿ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ. 
ಭಾರತ-ಚೀನಾ ಹಾಗೂ ಇತರ ರಾಷ್ಟ್ರಗಳ ನಡುವೆ ಇರುವ ಟ್ರೈ-ಜಂಕ್ಷನ್ ಗಡಿಗೆ ಸಂಬಂಧಿಸಿದ ವಿಷಯವನ್ನು ಸಂಬಂಧಪಟ್ಟ ರಾಷ್ಟ್ರಗಳೊಂದಿಗೇ ಚರ್ಚಿಸಿ ಬಗೆಹರಿಸುವುದಾಗಿ 2012 ರಲ್ಲಿ ಭಾರತ-ಚೀನಾ ಒಪ್ಪಂದ ಮಾಡಿಕೊಂಡಿರುವುದನ್ನು ಭಾರತ ಸರ್ಕಾರ ಚೀನಾ ಸರ್ಕಾರಕ್ಕೆ ನೆನಪಿಸಿದ್ದು, ಒಪ್ಪಂದದ ಪ್ರಕಾರ ಚೀನಾ, ಸಿಕ್ಕಿಂ ಪ್ರದೇಶದಲ್ಲಿರುವ ಭಾರತ-ಭೂತಾನ್-ಚೀನಾ ಈ ಮೂರು ರಾಷ್ಟ್ರಗಳಿಗೆ ಸಂಬಂಧಿಸಿದ ಗಡಿ ಪ್ರದೇಶದಲ್ಲಿ ಏಕಪಕ್ಷೀಯವಾಗಿ ಕ್ರಮ ಕೈಗೊಳ್ಳುವುದರಿಂದ ಒಪ್ಪಂದ ಉಲ್ಲಂಘನೆಯಾಗಲಿದೆ. ಅಷ್ಟೇ ಅಲ್ಲದೇ ಭದ್ರತೆಯ ಮೇಲೆ ಗಂಭೀರ ಪರಿಣಾಮ ಉಂಟಾಗಲಿದೆ ಎಂದು ಎಚ್ಚರಿಸಿದೆ. 
ಗಡಿ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳನ್ನು ಚೀನಾದೊಂದಿಗೆ ಶಾಂತಿಯುತವಾಗಿ ಬಗೆಹರಿಸಿಕೊಳ್ಳುವುದಕ್ಕೆ ಭಾರತ ಬದ್ಧವಾಗಿದೆ ಎಂದೂ ಇದೇ ವೇಳೆ ಭಾರತ ಸರ್ಕಾರದ ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದೆ. 
ಸಿಕ್ಕಿಂ ನಲ್ಲಿರುವ ದೋಕಾ ಲಾ ಪ್ರದೇಶದಲ್ಲಿ ಚೀನಾ ರಸ್ತೆ ನಿರ್ಮಾಣ ಕಾಮಗಾರಿಯನ್ನು ನಡೆಸುತ್ತಿರುವುದಕ್ಕೆ ಭೂತಾನ್ ಸಹ ಆಕ್ಷೇಪ ವ್ಯಕ್ತಪಡಿಸಿತ್ತು. ಭೂತಾನ್ ನ ಆರ್ಮಿ ಕ್ಯಾಂಪ್ ಬಳಿ ನಡೆಯುತ್ತಿರುವ  ಕಾಮಗಾರಿಯನ್ನು ಹಿಂಪಡೆಯಬೇಕೆಂದು ಚೀನಾಗೆ ನೀಡಿರುವ ರಾಜತಾಂತ್ರಿಕ ದೂರಿನಲ್ಲಿ ಆಗ್ರಹಿಸಿದೆ. 
SCROLL FOR NEXT