ಘಟನಾ ಸ್ಥಳದಲ್ಲಿರುವ ಪೊಲೀಸರು
ರಾಂಚಿ: ಗೋ ರಕ್ಷಣೆ ಹೆಸರಿನಲ್ಲಿ ಸಾರ್ವಜನಿಕರ ಮೇಲಿನ ದಾಳಿಗಳು ಸಮರ್ಥನೀಯವಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಎಚ್ಚರಿಕೆ ನೀಡಿರುವ ಬೆನ್ನಲ್ಲಿಯೇ ದನದ ಮಾಂಸ ಸಾಗಿಸುತ್ತಿದ್ದಾರೆಂಬ ಗುಮಾನಿಯಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಚೂರಿ ಇರಿದು ಹತ್ಯೆ ಮಾಡಿರುವ ಅಮಾನವೀಯ ಘಟನೆ ಜಾರ್ಖಾಂಡ್ ನಲ್ಲಿ ಗುರುವಾರ ನಡೆದಿದೆ.
ಜಾರ್ಖಾಂಡ್ ನ ರಾಮಗಢ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸುಮಾರು 100 ಮಂದಿ ದುಷ್ಕರ್ಮಿಗಳ ತಂಡದಿಂದ ಹತ್ಯೆಗೀಡಾದ ಸಂತ್ರಸ್ತನನ್ನು ಉದ್ಯಮಿ ಅಲಿಮುದ್ದೀನ್ ಅಕಾ ಅಸ್ಗರ್ ಅಲಿ (45) ಎಂದು ಗುರ್ತಿಸಲಾಗಿದೆ.
ಅಲಿಮುದ್ದೀನ್ ವಾಹನದಲ್ಲಿ ದನದ ಮಾಂಸ ಸಾಗಣೆ ಮಾಡುತ್ತಿದ್ದಾರೆಂದು ಶಂಕಿಸಿದ್ದ ದುಷ್ಕರ್ಮಿಗಳು ವಾಹನವನ್ನು ತಡೆದು ಚಾಕು ಇರಿದಿದ್ದಾರೆ. ಅಲ್ಲದೆ, ವಾಹನಕ್ಕೆ ಬೆಂಕಿ ಹಚ್ಚುವ ಮೂಲಕ ಪೈಶಾಚಿಕ ಕೃತ್ಯವೆಸಗಿದ್ದಾರೆ. ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಸಂತ್ರಸ್ತ ಅಲಿಮುದ್ದೀನ್ ನನ್ನು ರಕ್ಷಣೆ ಮಾಡಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಲಿಮುದ್ದೀನ್ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಗೋಹತ್ಯೆ ಮಾಡಿದ್ದಾನೆಂಬ ಸಂಶಯದ ಮೇರೆಗೆ 200 ಮಂದಿ ಗೋರಕ್ಷಕರ ತಂಡ ಗಿರಿದಿ ಜಿಲ್ಲೆಯ ಬರಿಯಾಬಾದ್ ಗ್ರಾಮದ ಉಸ್ಮಾನ್ ಅನ್ಸಾರಿಯವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿತ್ತು. ಅಲ್ಲದೆ, ಅವರ ಮನೆಗೆ ಬೆಂಕಿ ಹಚ್ಚಿತ್ತು.