ದೇಶ

ನೂತನ ಅಟಾರ್ನಿ ಜನರಲ್ ಆಗಿ ಕೆ ಕೆ ವೇಣುಗೋಪಾಲ್ ನೇಮಕ ಸಾಧ್ಯತೆ

Lingaraj Badiger
ನವದೆಹಲಿ: ಭಾರತದ ಅಟಾರ್ನಿ ಜನರಲ್ ಮುಕುಲ್‌ ರೋಹಟಗಿ ಅವರು ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್‌ ಅವರನ್ನು ನೇಮಕ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ, ನೆದರಲ್ಯಾಂಡ್ ಹಾಗೂ ಪೋರ್ಚಗಲ್ ಪ್ರವಾಸ ಕೈಗೊಳ್ಳುವ ಮುನ್ನ 86ರ ವರ್ಷದ ಕೆ ಕೆ ವೇಣುಗೋಪಾಲ್‌ ಅವರನ್ನು ರೋಹಟಗಿ ಅವರ ಉತ್ತರಾಧಿಕಾರಿಯಾಗಿ ನೇಮಿಸುವ ಕುರಿತು ಚರ್ಚಿಸಿದ್ದರು. ಅಲ್ಲದೆ ವಿದೇಶ ಪ್ರವಾಸ ಕೈಗೊಳ್ಳುವ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರನ್ನು ವೇಣುಗೋಪಾಲ್ ಖುದ್ದು ಭೇಟಿಯಾಗಿ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಟಾರ್ನಿ ಜನರಲ್‌ ಆದಾಗ ನಿಮ್ಮ ಆದ್ಯತೆಗಳೇನು ಎಂಬ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವೇಣುಗೋಪಾಲ್‌ ಅವರು, ಅಧಿಸೂಚನೆ ಜಾರಿಗೊಂಡ ಬಳಿಕವೇ ಆ ಬಗ್ಗೆ ನಾನು ಮಾತನಾಡುತ್ತೇನೆ ಎಂದಿದ್ದಾರೆ.
ಇನ್ನು ಅಟಾರ್ನಿ ಜನರಲ್‌ ಹುದ್ದೆಗೆ ವೇಣುಗೋಪಾಲ್ ಅವರನ್ನು ನೇಮಕ ಮಾಡುವ ಸಂಬಂಧ ಕಡತವನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಗಿದೆ. ಮೋದಿ ಅವರ ಅನುಮೋದನೆ ಬಳಿಕ ರಾಷ್ಟ್ರಪತಿಯ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
SCROLL FOR NEXT