ಸಂಸತ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ
ನವದೆಹಲಿ: ಜು.30 ರ ಮಧ್ಯರಾತ್ರಿ ನಡೆದ ಸಂಸತ್ ವಿಶೇಷ ಅಧಿವೇಶನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಜಾರಿಗೊಂಡಿದೆ.
ವಿಶೇಷ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸರಕು ಮತ್ತು ಸೇವಾ ತೆರಿಗೆಗೆ (ಜಿಎಸ್ಟಿ) ಗೆ ಚಾಲನೆ ನೀಡಿದ್ದು, ಜಿಎಸ್ ಟಿ ಜಾರಿಯಾಗಿದೆ.
ಜಿಎಸ್ ಟಿ ಗೆ ಚಾಲನೆ ನೀಡುವುದಕ್ಕೂ ಮುನ್ನ ಜಂಟಿ ವಿಶೇಷ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜಿಎಸ್ ಟಿ ಯಾವುದೇ ಒಂದು ಸರ್ಕಾರ ಅಥವಾ ಪಕ್ಷದ ಸಾಧನೆಯಲ್ಲ, ಇದು ಎಲ್ಲರ ಒಗ್ಗಟ್ಟಿನ ಶ್ರಮದ ಫಲವಾಗಿದೆ. ಹಲವು ತಜ್ಞರ ಮಾರ್ಗದರ್ಶನದಲ್ಲಿ ಜಿಎಸ್ ಟಿ ರೂಪುಗೊಂಡಿರುವ ಜಿಎಸ್ ಟಿ ಜಾರಿಯ ಮೂಲಕ ಭಾರತಕ್ಕೆ ಆರ್ಥಿಕ ಸ್ವಾತಂತ್ರ್ಯ ದೊರೆತಿದೆ ಎಂದು ಹೇಳಿದ್ದಾರೆ.
ಜಿಎಸ್ ಟಿ ಕೇವಲ ಅರ್ಥವ್ಯವಸ್ಥೆಯ ಕ್ರಾಂತಿಯಷ್ಟೇ ಅಲ್ಲದೇ ಲೋಕತಂತ್ರ ವ್ಯವಸ್ಥೆಯ ದೊಡ್ಡ ಕ್ರಾಂತಿಯೂ ಆಗಿದೆ. ಜಿಎಸ್ ಟಿ ಜಾರಿ ಮೂಲಕ ಭಾರತದ ಅಭಿವೃದ್ಧಿಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದ್ದು, ಭಾರತ ಹೊಸ ದಿಕ್ಕಿನತ್ತ ಸಾಗಲಿದೆ. ಸ್ವಾತಂತ್ರ್ಯ ಬಂದಾಗ ಸಂಸತ್ ನಲ್ಲಿ ಮಧ್ಯರಾತ್ರಿ ವಿಶೇಷ ಅಧಿವೇಶನ ನಡೆದಿತ್ತು, ಸ್ವಾತಂತ್ರ್ಯ ನಂತರ ವಲ್ಲಭ ಭಾಯ್ ಪಟೇಲ್ ಅವರು ದೇಶವನ್ನು ಒಗ್ಗೂಡಿಸಿದ್ದರು, ಈಗ ಜಿಎಸ್ ಟಿಯಿಂದ ಆರ್ಥಿಕ ಸ್ವಾತಂತ್ರ್ಯ ದೊರೆತಿದ್ದು, ಜಿಎಸ್ ಟಿ ಆರ್ಥಿಕ ಏಕೀಕರಣದ ಮಹತ್ವದ ಘಟ್ಟವಾಗಿದೆ ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಜಿಎಸ್ ಟಿಗೆ ಹೊಸ ವ್ಯಾಖ್ಯಾನ ನೀಡಿದ್ದು, ಕಾನೂನಿನ ಭಾಷೆಯಲ್ಲಿ ಜಿಎಸ್ ಟಿ ಅಂದ್ರೆ ಸರಕು ಮತ್ತು ಸೇವಾ ತೆರಿಗೆ ಎಂದು ಹೇಳಲಾಗುತ್ತದೆ. ಆದರೆ ಸರಳವಾಗಿ ಹೇಳಬೇಕೆಂದರೆ ಜಿಎಸ್ ಟಿ ಅಂದ್ರೆ ಗುಡ್ ಆಂಡ್ ಸಿಂಪಲ್ ಟ್ಯಾಕ್ಸ್ ಎಂದು ಹೇಳಿದ್ದಾರೆ.
ಭಾಷಣದಲ್ಲಿ ಚಾಣಕ್ಯನನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ
ಯಾವುದೇ ವಸ್ತು ಎಷ್ಟೇ ದೂರದಲ್ಲಿರಲಿ, ಕಠಿಣ ಪರಿಶ್ರಮದಿಂದ ಪಡೆಯಬಹುದು ಎಂದು ಚಾಣಕ್ಯ ಹೇಳಿದ್ದಾರೆ. ಅಂತೆಯೇ ಜಿಎಸ್ ಟಿ ಹಲವು ವರ್ಷಗಳ ಪರಿಶ್ರಮದ ಫಲವಾಗಿದೆ ಎಂದು ಹೇಳುವ ಮೂಲಕ ಮೋದಿ ತಮ್ಮ ಭಾಷಣದಲ್ಲಿ ಚಾಣಕ್ಯನನ್ನು ಸ್ಮರಿಸಿದ್ದಾರೆ.
ಸ್ವಾತಂತ್ರ್ಯ ಬಂದ ನಂತರ ಕೇವಲ 3 ಐತಿಹಾಸಿಕ ಘಟನೆಗಳಲ್ಲಿ ಮಧ್ಯರಾತ್ರಿ ಸಂಸತ್ ನಲ್ಲಿ ಕಾರ್ಯಕ್ರಮ ನಡೆಸಲಾಗಿದೆ. ಸ್ವಾತಂತ್ರ್ಯ ಬಂದಾಗ ಮೊದಲ ಬಾರಿ, ಸ್ವಾತಂತ್ರ್ಯೋತ್ಸವದ 25 ನೇ ವರ್ಷಾಚರಣೆ ಹಾಗೂ 50 ನೇ ವರ್ಷಾಚರಣೆ ವೇಳೆ ಸಂಸತ್ ನಲ್ಲಿ ಮಧ್ಯರಾತ್ರಿ ಕಾರ್ಯಕ್ರಮ ನಡೆಸಲಾಗಿತ್ತು. ಈಗ ಜಿಎಸ್ ಟಿ ಜಾರಿಗೆ ಮಧ್ಯರಾತ್ರಿ ಅಧಿವೇಶನ ನಡೆಸಲಾಗಿದೆ.