ಕೋಟ: ಆಕೆಗೆ ಮದುವೆಯಾದಾಗ ಕೇವಲ 8 ವರ್ಷ ವಯಸ್ಸು. ಆದರೆ ಬಾಲ್ಯ ವಿವಾಹ ಆಕೆಯ ವೈದ್ಯೆಯಾಗುವ ಕನಸಿಗೆ ಎಂದಿಗೂ ಅಡ್ಡಿಯಾಗಲಿಲ್ಲ. ತೀರಾ ಸಂಪ್ರದಾಯದ ಕುಟುಂಬ, ಹಳ್ಳಿ ವಾತಾವರಣದಲ್ಲಿ ಬೆಳೆದ ರೂಪಾ ಯಾದವ್ ಇಂದು ವೈದ್ಯಕೀಯ ಪರೀಕ್ಷೆಯನ್ನು ಪಾಸ್ ಮಾಡಿಕೊಂಡಿದ್ದು, ವೈದ್ಯೆಯಾಗುವ ಆಶಾವಾದದಲ್ಲಿದ್ದಾಳೆ.
ಇದೀಗ ರೂಪಾ ಯಾದವ್ ಗೆ 21 ವರ್ಷ, ಈ ವರ್ಷದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್) ಯಲ್ಲಿ 603 ಅಂಕಗಳನ್ನು ಗಳಿಸುವ ಮೂಲಕ ದೇಶಕ್ಕೆ 2,612 ರ್ಯಾಂಕ್ ಗಳಿಸಿದ್ದಾಳೆ.
ಆಕೆಯ ಪತಿ ಮತ್ತು ಬಾವ ಇಬ್ಬರೂ ರೈತರು. ಆದರೂ ಕೂಡ ರೂಪಾ ಯಾದವ್ ಳ ಓದಿನ ಆಸಕ್ತಿಗೆ ಒಂಚೂರು ಅಡ್ಡ ಬರಲಿಲ್ಲ. ಪ್ರೋತ್ಸಾಹ ನೀಡಿದರು. ಗ್ರಾಮಸ್ಥರು, ನೆರೆ ಹೊರೆಯವರು ಟೀಕಿಸುತ್ತಿದ್ದರೂ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆಟೋ ಓಡಿಸಿ ರೂಪಾಳ ಗಂಡ ಪತ್ನಿಯನ್ನು ಓದಿಸಿದ್ದಾರೆ.
ರಾಜಸ್ತಾನದ ಜೈಪುರ ಜಿಲ್ಲೆಯ ಕರೇರಿ ಗ್ರಾಮದಲ್ಲಿ ಬಡ ರೈತ ಕುಟುಂಬದಲ್ಲಿ ಜನಿಸಿದ ರೂಪಾಳನ್ನು ಆಕೆ 3ನೇ ತರಗತಿಯಲ್ಲಿರುವಾಗ ಮತ್ತು ಆಕೆಯ ಹಿರಿಯ ಸೋದರಿ ರುಕ್ಮಾಳನ್ನು 12 ವರ್ಷದ ಶಂಕರ್ ಲಾಲ್ ಮತ್ತು ಆತನ ಸೋದರ ಬಾಬುಲಾಲ್ ಗೆ ತಂದೆ-ತಾಯಿ ಮದುವೆ ಮಾಡಿ ಕೊಟ್ಟಿದ್ದರು.
ಓದಿನಲ್ಲಿ ಮುಂದಿದ್ದ ರೂಪಾ 10ನೇ ತರಗತಿಯಲ್ಲಿ ದಿನಕ್ಕೆ5-6 ಕಿಲೋ ಮೀಟರ್ ಶಾಲೆಗೆ ನಡೆದುಕೊಂಡು ಹೋಗಿ ಓದಿ ಶೇಕಡಾ 84 ಅಂಕ ಗಳಿಸಿದ್ದಳು. ನಂತರ ಕಾಲೇಜು ಶಿಕ್ಷಣ ಮುಂದುವರಿಸಲು ಆಕೆಯ ಪತಿ ಮತ್ತು ಬಾವ ಸಹಕಾರ ನೀಡಿದರು. ತನ್ನ ಕನಸಿಗೆ ಉತ್ತೇಜನ ನೀಡಿದವರಲ್ಲಿ ಪತಿಯ ತಂದೆ-ತಾಯಿಯ ಪಾತ್ರ ಕೂಡ ಮುಖ್ಯವಾಗಿದೆ ಎನ್ನುತ್ತಾಳೆ ರೂಪಾ.
ಕಾಲೇಜು ಶಿಕ್ಷಣವನ್ನು ಕೂಡ ಆಸಕ್ತಿಯಿಂದ ಅಧ್ಯಯನ ಮಾಡಿದ ರೂಪಾಳಿಗೆ ಅಲ್ಲಿ ಕೂಡ ಶೇಕಡಾ 85 ಅಂಕ ದೊರಕಿತು. ಈ ಮಧ್ಯೆ ಮನೆಯ ಕೆಲಸಗಳನ್ನು ಕೂಡ ನಿಭಾಯಿಸುತ್ತಿದ್ದಳು. ಪಿಯುಸಿ ಮುಗಿದ ತಕ್ಷಣ ಬಿ.ಎಸ್ಸಿಗೆ ಸೇರಿದಳು. ಅಲ್ಲದೆ ಎಐಪಿಎಂಟಿ ಪರೀಕ್ಷೆಗೆ ಕೂಡ ಹಾಜರಾದಳು. ಅದರಲ್ಲಿ ರಾಷ್ಟ್ರ ಮಟ್ಟದಲ್ಲಿ 23,000 ರ್ಯಾಂಕ್ ಸಿಕ್ಕಿತು.
ಉತ್ತಮ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಅರ್ಹತೆ ಪಡೆಯದಿದ್ದರೂ ಕೂಡ ಎಐಪಿಎಂಟಿಯಲ್ಲಿ ಅಂಕಗಳು ನನಗೆ ಎಂಬಿಬಿಎಸ್ ಪ್ರವೇಶ ಪರೀಕ್ಷೆಗೆ ತಯಾರು ಮಾಡಲು ನನ್ನ ಪತಿ ಹಾಗೂ ಬಾವನಿಗೆ ಪ್ರೋತ್ಸಾಹಿಸಲು ಕಾರಣವಾಗಿದೆ ಎಂದು ರೂಪಾ ಖುಷಿಯಿಂದ ಹೇಳುತ್ತಾಳೆ.
ಹೊಲದಲ್ಲಿ ಉಳುಮೆ ಮಾಡಿ, ಆಡು, ಮೇಕೆಗಳನ್ನು ಸಾಕಿ ರೂಪಾಗೆ ಓದಲು ಆಕೆಯ ಮನೆಯವರು ಸಹಾಯ ಮಾಡಿದ್ದಾರೆ. ಕಳೆದ ವರ್ಷ ನೀಟ್ ಪರೀಕ್ಷೆ ಬರೆದಿದ್ದ ರೂಪಾಗೆ ಸ್ವಲ್ಪ ಅಂಕಗಳಲ್ಲಿಯೇ ಗುರಿ ತಲುಪಲು ಸಾಧ್ಯವಾಗಲಿಲ್ಲ. ಮರು ವರ್ಷ ಕೋಚಿಂಗ್ ಸೆಂಟರ್ ನ ಸಹಾಯದಿಂದ ಪರೀಕ್ಷೆ ತೇರ್ಗಡೆ ಮಾಡಿಕೊಂಡಳು.
ಇದೀಗ ಮೆಡಿಕಲ್ ಕೌನ್ಸೆಲಿಂಗ್ ಸೆಷನ್ ನಲ್ಲಿ ರೂಪಾ ಬ್ಯುಸಿಯಾಗಿದ್ದಾಳೆ. ಇಂದು ಅನೇಕ ಮಹಿಳೆಯರಿಗೆ, ಯುವತಿಯರಿಗೆ ರೂಪಾ ಯಾದವ್ ಸ್ಫೂರ್ತಿಯಾಗಿದ್ದಾಳೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos