ಜಂತರ್ ಮಂತರ್ ನಲ್ಲಿ ಪ್ರತಿಭಟನಾಕಾರರು
ನವದೆಹಲಿ: ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ತಮ್ಮ ಸಮುದಾಯಕ್ಕೆ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಜಾಟ್ ಸಮುದಾಯ ನಡೆಸುತ್ತಿರುವ ಪ್ರತಿಭಟನೆ ಗುರುವಾರ ದೆಹಲಿಯ ಜಂತರ್ ಮಂತರ್ ತಲುಪಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.
ಹರ್ಯಾಣ, ದೆಹಲಿ, ಉತ್ತರ ಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಪಂಜಾಬ್, ರಾಜಸ್ಥಾನ್ ಮತ್ತು ಮಧ್ಯಪ್ರದೇಶ ಮುಂತಾದ ಕಡೆಗಳಿಂದ ಜಾಟ್ ಸಮುದಾಯದವರು ಇಂದು ಬೆಳಗ್ಗೆ 11 ಗಂಟೆಗೆ ಜಂತರ್ ಮಂತರ್ ಆಗಮಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 24, ದೆಹಲಿ - ಆಗ್ರ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಹಲವು ಕಡೆ ಟ್ರಾಫಿಕ್ ಜಾಮ್ ಉಂಟಾಗಿದೆ.
ದೆಹಲಿ ಟ್ರಾಫಿಕ್ ಪೊಲೀಸರ ಪ್ರಕಾರ, ಇಂದು ದೆಹಲಿಯಲ್ಲಿ ಸಂಚಾರ ನಿರ್ವಹಣೆಗಾಗಿ ಸುಮಾರು 4 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.
ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ, ಪ್ಯಾರಾ ಮಿಲಿಟರಿ ಪಡೆ ಸೇರಿದಂತೆ ನೂರಾರು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ.
ಸರ್ಕಾರದ ಜತೆ ಅಸಹಕಾರ ಚಳವಳಿಗೆ ಮುಂದಾಗಿರುವ ಪ್ರತಿಭಟನಾಕಾರರು, ವಿದ್ಯುತ್ ಮತ್ತು ನೀರಿನ ಬಿಲ್ಲುಗಳನ್ನು ಪಾವತಿಸುವುದಿಲ್ಲ, ಸರ್ಕಾರದಿಂದ ಪಡೆದಿರುವ ಸಾಲದ ಕಂತುಗಳನ್ನೂ ಪಾವತಿಸದಿರಲು ನಿರ್ಧರಿಸಿರುವುದಾಗಿ ಅಖಿಲ ಭಾರತ ಜಾಟ್ ಅರಕ್ಷನ್ ಸಂಘರ್ಷ ಸಮಿತಿ ಅಧ್ಯಕ್ಷ ಯಶ್‌ಪಾಲ್ ಮಲಿಕ್ ತಿಳಿಸಿದ್ದಾರೆ.
ಕಳೆದ ವರ್ಷ ಹರ್ಯಾಣಾದಲ್ಲಿ ನಡೆದ ಗಲಭೆಯಲ್ಲಿ 30 ಮಂದಿ ಮೃತಪಟ್ಟಿದ್ದರು. ಈ ಗಲಭೆಯಿಂದ ನೆರೆಯ ಜಿಲ್ಲೆಗಳಾದ ಸೋನಿಪತ್ ಮತ್ತು ಜಜ್ಜರ್‌ನಲ್ಲಿ ಪರಿಸ್ಥಿತಿ ಚಿಂತಾಜನಕವಾಗಿತ್ತು.