ನವದೆಹಲಿ: ರಾಜಕೀಯ ಪ್ರವೇಶಿಸುವ ಬಗ್ಗೆ ನನಗೆ ಎಳ್ಳಷ್ಟು ಆಸಕ್ತಿಯಿಲ್ಲ ಎಂದು ರಾಮ್ಜಾಸ್ ಕಾಲೇಜು ಘರ್ಷಣೆ ಪ್ರಕರಣ ಸಂಬಂಧ ಎಬಿವಿಪಿ ವಿರುದ್ಧ ಸಿಡಿದೆದ್ದಿದ್ದ ಕಾರ್ಗಿಲ್ ಹುತಾತ್ಮ ಯೋಧನ ಪುತ್ರಿ ಗುರ್ಮೆಹರ್ ಕೌರ್ ಅವರು ಗುರುವಾರ ಹೇಳಿದ್ದಾರೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾನು ಎತ್ತಿದ ವಿಷಯ ನನ್ನ ಕೈಮೀರಿ ಹೋಗಿದೆ. ರಾಜಕೀಯಕ್ಕೆ ಪ್ರವೇಶಿಸುವ ಇಚ್ಛೆ ನನಗಿಲ್ಲ ಎಂಬುದನ್ನು ನಾನು ಮೊದಲು ಸ್ಪಷ್ಟಪಡಿಸುವೆ. ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೆ ಅಷ್ಟೆ. ಆದರೆ, ಈ ವಿಷಯ ಇಷ್ಟೊಂದು ದೊಡ್ಡ ತಿರುವು ಪಡೆಯುತ್ತದೆ ಎಂದು ಯೋಚಿಸಿಯೇ ಇರಲಿಲ್ಲ. ನನಗಿದು ನಿಜಕ್ಕೂ ಕೆಟ್ಟ ಸಮಯ, ಈ ಬಗ್ಗೆ ಮಾತನಾಡುವ ಪರಿಸ್ಥಿತಿಯಲ್ಲಿ ನಾನಿಲ್ಲ. ಇನ್ನು ಮುಂದೆ ಈ ವಿಷಯವನ್ನು ಮಾತನಾಡಲಾರೆ ಎಂದು ಹೇಳಿದ್ದಾರೆ.
ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿವಾದಿತ ವಿದ್ಯಾರ್ಥಿಯೊಬ್ಬರು ರಾಮಜಾಸ್ ಕಾಲೇಜಿನ ಸೆಮಿನಾರ್ ವೊಂದರಲ್ಲಿ ಭಾಗವಹಿಸುವುದನ್ನು ವಿರೋಧಿಸಿ ಎಬಿವಿಪಿಗೆ ಸೇರಿದ ವಿದ್ಯಾರ್ಥಿಗಳು ಕಾಲೇಜಿನ ಸೆಮಿನಾರ್ ರನ್ನು ಬಲವಂತವಾಗಿ ರದ್ದುಪಡಿಸಿದ್ದರು. ಆ ಬಳಿಕ ಕಾಲೇಜು ಕ್ಯಾಂಪಸ್ ನಲ್ಲಿ ವಿವಾದ ತಲೆ ಎತ್ತಿತ್ತು.
ತದನಂತರ ಗುರ್ಮೆಹರ್ ಕೌರ್ ಸಾಮಾಜಿಕ ಜಾಲತಾಣದಲ್ಲಿ ಎಬಿವಿಪಿ ವಿರುದ್ಧ ಅಭಿಯಾನ ನಡೆಸಿದ್ದರು. ಅಭಿಯಾನದ ಬಳಿಕ ಕೌರ್ ಗೆ ಜೀವ ಬೆದರಿಕೆ ಹಾಗೂ ಅತ್ಯಾಚಾರ ಬೆದರಿಕೆಗಳು ಬಂದಿತ್ತು.