ಲಾಹೋರ್: 26/11 ಮುಂಬೈ ಉಗ್ರ ದಾಳಿ ಪ್ರಕರಣವನ್ನು ಮರು ತನಿಖೆ ನಡೆಸಿ, ಜಮತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ನನ್ನು ವಿಚಾರಗೊಳಪಡಿಸಿ ಎಂದು ಪಾಕಿಸ್ತಾನಕ್ಕೆ ಭಾರತ ಗುರುವಾರ ಆಗ್ರಹಿಸಿದೆ.
ಉಗ್ರ ಹಫೀಜ್ ಸಯೀದ್ ನನ್ನು ಗೃಹ ಬಂಧನದಲ್ಲಿರಿಸಿ, ಆತನ ವಿರುದ್ಧ ಭಯೋತ್ಪದನೆ ವಿರೋಧಿ ಕಾಯ್ದೆ(ಎಟಿಎ) ಜಾರಿಗೊಳಿಸಿದ್ದ ಪಾಕಿಸ್ತಾನ ಕೊನೆಗೂ ಹಫೀಜ್ ಸಯೀದ್ ನಮ್ಮ ದೇಶಕ್ಕೇ ಅಪಾಯ ಎಂದು ಒಪ್ಪಿಕೊಂಡಿತ್ತು.
ಪ್ರಸ್ತುತ ಹಫೀಜ್ ಗೃಹ ಬಂಧನ ಮುಂದುವರಿದಿರುವ ಹಿನ್ನಲೆಯಲ್ಲಿ, 2008ರ 26/11 ರಲ್ಲಿ ನಡೆಸಲಾದ ಮುಂಬೈ ದಾಳಿ ಪ್ರಕರಣವನ್ನು ಮರು ತನಿಖೆ ನಡೆಸಿ, ಹಫೀಜ್ ಸಯೀದ್ ನನ್ನು ವಿಚಾರಣೆಗೊಳಪಡಿಸುವಂತೆ ಭಾರತ ಆಗ್ರಹಿಸಿದೆ ಎಂದು ಆಂತರಿಕ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಸಂಬಂಧ ಈ ಹಿಂದೆ ಪಾಕಿಸ್ತಾನ ಸರ್ಕಾರ ಭಾರತ ಸರ್ಕಾರ ಕಲೆ ಹಾಕಿರುವ 24 ಸಾಕ್ಷ್ಯಾಧಾರಗಳನ್ನು ರವಾನೆ ಮಾಡುವಂತೆ ತಿಳಿಸಿ ಪತ್ರವೊಂದನ್ನು ಕಳುಹಿಸಿತ್ತು. ಆದರೆ, ಇದಕ್ಕೆ ಉತ್ತರ ನೀಡುವ ಬದಲು ಭಾರತ ಸರ್ಕಾರ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ಹಾಗೂ ಹಫೀಜ್, ಜಾಕಿರ್ ರೆಹ್ಮಾನ್ ಲಖ್ವಿಯನ್ನು ಮತ್ತೆ ವಿಚಾರಣೆಗೊಳಪಡಿಸುವಂತೆ ಆಗ್ರಹಿಸುತ್ತಿದೆ. ಪ್ರಕರಣದ ವಿಚಾರಣೆ ಕಳೆದ 7 ವರ್ಷಗಳಿಂದಲೂ ಪ್ರಗತಿಯಲ್ಲಿದೆಯೇ ಈ ವರೆಗೂ ತಾರ್ಕಿಕ ಹಂತಕ್ಕೆ ಬಂದಿಲ್ಲ. ಪ್ರಕರಣ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲು ಭಾರತ ನೀಡುವ ಸಾಕ್ಷ್ಯಾಧಾರಗಳ ಅಗತ್ಯವಿದೆ ಪಾಕಿಸ್ತಾನದ ಅಧಿಕಾರಿಗಳು ಹೇಳಿಕೊಂಡಿದ್ದಾರೆ.
ಲಖ್ವಿ ವಿರುದ್ದ ಸಾಕ್ಷ್ಯಾಧಾರಗಳ ಕೊರತೆಯಿದ್ದ ಕಾರಣ ಆತ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ. ಹಫೀಜ್ ವಿರುದ್ಧ ಭಾರತದ ಬಳಿಯಿರುವ ಸಾಕ್ಷ್ಯಾಧಾರಗಳನ್ನು ಒದಗಿಸಿದ್ದೇ ಆದರೆ, ಹಫೀಜ್ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದೆ.
ಉಗ್ರ ಹಫೀಜ್ ಅಪಾಯಕಾರಿ ವ್ಯಕ್ತಿ ಎಂದು ಪ್ರತೀ ಬಾರಿ ಭಾರತ ಹೇಳಿದಾಗಲೂ ಹಫೀಜ್ ಪರವಾಗಿಯೇ ನಿಂತಿದ್ದ ಪಾಕಿಸ್ತಾನ ಕೊನೆಗೂ ಆತನ ವಿರುದ್ಧ ಉಗ್ರ ವಿರೋಧಿ ಕಾಯ್ದೆ ಜಾರಿಗೊಳಿಸಿ, ಆತನ ಚಲನ-ವಲನಗಳ ಮೇಲೆ ನಿರ್ಬಂಧ ವಿಧಿಸಿತ್ತು.