ವಾರಣಾಸಿ: ಪ್ರಸ್ತುತ ಉತ್ತರ ಪ್ರದೇಶದಲ್ಲಿ ಬಿಜೆಪಿ ಪರ ಅಲೆಇದ್ದು, ಈ ಭಾರಿ ಖಂಡಿತ ಬಿಜೆಪಿ ಅಧಿಕಾರದ ಗದ್ದುಗೇ ಏರಲಿದೆ ಎಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯ ಅಂತಿಮ ಹಂತದ ಮತದಾನದ ನಿಮಿತ್ತ ವಾರಣಾಸಿಯಲ್ಲಿ ಪ್ರಚಾರ ನಡೆಸುತ್ತಿರುವ ರಾಜನಾಥ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ ಉತ್ತರ ಪ್ರದೇಶದಲ್ಲಿ ಆಢಳಿತ ವಿರೋಧಿ ಅಲೆ ಇದ್ದು, ಬಿಜೆಪಿ ಪರ ಜನರಿದ್ದಾರೆ. ಕೇವಲ ನಾವಷ್ಟೇ ಅಲ್ಲ.. ರಾಜಕೀಯ ತಜ್ಞರೂ ಕೂಡ ಉತ್ತರಪ್ರದೇಶದಲ್ಲಿ ಬಿಜೆಪಿ ಸ್ಪಷ್ಟ ಬಹುಮತದ ಮೂಲಕ ಸರ್ಕಾರ ರಚಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜನ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಅವರು, ದೇಶಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡುತ್ತಿರುವ ಕೆಲಸ ಬಿಜೆಪಿಗೆ ಪ್ರತಿಫಲವನ್ನು ನೀಡುತ್ತಿದೆ. ಮೋದಿಯವರ ಉತ್ತಮ ಕೆಲಸದಿಂದ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬೆಂಬಲ ಸಿಗುತ್ತಿವೆ ಎಂದು ಹೇಳಿದ್ದಾರೆ.