ರೋಡ್ ಶೋ ನಡೆಸುತ್ತಿರುವ ಪ್ರಧಾನಿ ಮೋದಿ
ವಾರಣಾಸಿ: ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ 'ಗಾಯತ್ರಿ ಪ್ರಜಾಪತಿ' ಮಂತ್ರ ಪಠಿಸುತ್ತಿವೆ. ಹೀಗಾಗಿಯೇ ಉತ್ತರ ಪ್ರದೇಶದಲ್ಲಿ ಕಳೆದುಹೋದ ಎಮ್ಮೆಗಳು ಸಿಗುತ್ತವೆ. ಆದರೆ ಪೊಲೀಸರಿಗೆ ಅತ್ಯಾಚಾರ ಆರೋಪಿ ಪ್ರಜಾಪತಿಯನ್ನು ಪತ್ತೆ ಹಚ್ಚುವುದು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ತಮ್ಮ ಸ್ವಕ್ಷೇತ್ರ ವಾರಣಾಸಿಯಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡಿದರು. ಈ ವೇಳೆ ಕಾಶಿ ವಿಶ್ವನಾಥ ಹಾಗೂ ಕಾಲ ಭೈರವ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಜೌನಪುರ್ ನಲ್ಲಿ ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದೆಗೆಟ್ಟಿದೆ. ನಾವು ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಸೂಕ್ತ ಭದ್ರತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇದೇ ವೇಳೆ ಸೇನೆಯ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಮೋದಿ, ಭಾರತೀಯ ಸೇನೆ ನಡೆದ ನಿರ್ಧಿಷ್ಟ ದಾಳಿಯ ಬಗ್ಗೆ ಈಡೀ ವಿಶ್ವವೇ ಪ್ರಶಂಸೆ ವ್ಯಕ್ತಪಡಿಸಿದೆ. ಆದರೆ ಪ್ರತಿಪಕ್ಷಗಳು ಮಾತ್ರ ಸೇನೆಯನ್ನೇ ಅನುಮಾನದಿಂದ ನೋಡುತ್ತಿವೆ ಎಂದರು.
ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಒಆರ್ಒಪಿ ಯೋಜನೆಗಾಗಿ ಕೇವಲ 500 ಕೋಟಿ ರುಪಾಯಿ ನೀಡುವ ಮೂಲಕ ಯೋಧರಿಗೆ ಮೋಸ ಮಾಡಿದೆ. ಆದರೆ ನಾವು ಅಧಿಕಾರಕ್ಕೆ ಬಂದ ಮೇಲೆ ಗೊತ್ತಾಯಿತು, ಆಯೋಜನೆಗೆ 12 ಸಾವಿರ ಕೋಟಿ ರುಪಾಯಿ ಬೇಕು ಅಂತ. ಆ ಯೋಜನೆಗಾಗಿ ನಾವು 6 ಸಾವಿರ ಕೋಟಿ ರುಪಾಯಿ ಬಿಡುಗಡೆ ಮಾಡಿದ್ದೇವೆ ಎಂದರು.