ನವದೆಹಲಿ: ಅತ್ಯಾಚಾರ ಆರೋಪದ ಮೇಲೆ ತಲೆ ಮರೆಸಿಕೊಂಡಿರುವ ಉತ್ತರ ಪ್ರದೇಶ ಸಚಿವ ಗಾಯಿತ್ರಿ ಪ್ರಜಾಪತಿ ಬಂಧನಕ್ಕೆ ತಡೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಗಾಯಿತ್ರಿ ಪ್ರಜಾಪತಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಅದಾದ ನಂತರ ಅಂದರೆ ಫೆಬ್ರವರಿ 27 ರಿಂದ ಪ್ರಜಾಪತಿ ತಲೆ ಮರೆಸಿಕೊಂಡಿದ್ದಾರೆ.
ಸಚಿವರ ವಿರುದ್ಧ ಎಫ್ ಐಆರ್ ದಾಖಲಾದ ನಂತರ ಸಂಬಂಧ ಪಟ್ಟ ನ್ಯಾಯಾಲಯದಲ್ಲಿ ಹಾಜರಾಗುವಂತೆ ಸುಪ್ರೀಂಕೋರ್ಟ್ ಗಾಯತ್ರಿ ಪ್ರಜಾಪತಿಗೆ ಸೂಚಿಸಿತ್ತು. ಆತನನ್ನು ಬಂಧಿಸಬೇಕೆ ಅಥವಾ ಬೇಡವೇ ಎಂಬುದನ್ನು ರಾಜ್ಯ ಪೊಲೀಸರು ನಿರ್ಧರಿಸಬೇಕು ಎಂದು ಕೋರ್ಟ್ ತಿಳಿಸಿದೆ.
ಪ್ರಜಾಪತಿ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆತ ಬಂಧನವಾಗಿದ್ದರೇ ಮಾತ್ರ ಸಂಬಂಧ ಪಟ್ಟ ಕೋರ್ಟಿನಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಬೇಕು ಎಂದು ಹೇಳಿದೆ.
ಪ್ರಜಾಪತಿ ವಿರುದ್ಧ ಎಫ್ ಐ ಆರ್ ದಾಖಲಾಗಿರುವುದಕ್ಕೆ ರಾಜಕೀಯ ಬಣ್ಣ ಹಚ್ಚುತ್ತಿರುವುದನ್ನು ಕೋರ್ಟ್ ಗಮನಿಸುತ್ತಿದೆ, ಇದು ದುರಾದೃಷ್ಟಕರ ಎಂದು ನ್ಯಾಯಾಲಯ ತಿಳಿಸಿದೆ.
ಉತ್ತರ ಪ್ರದೇಶದಲ್ಲಿ ಸದ್ಯ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಗಾಯತ್ರಿ ಪ್ರಜಾಪತಿ ಸಮಾಜವಾದಿ ಪಕ್ಷದಿಂದ ಅಮೇಥಿ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.