ದೇಶ

ಶೀಘ್ರವೇ ಭಾರತಕ್ಕೆ ಭೇಟಿ ನೀಡುತ್ತೇನೆ: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ

Srinivas Rao BV
ಜಕಾರ್ತ: ಶೀಘ್ರವೇ ಭಾರತಕ್ಕೆ ಭೇಟಿ ನೀಡುವುದಾಗಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. 2016 ರ ಡಿಸೆಂಬರ್ ನಲ್ಲೇ ಶೇಖ್ ಹಸೀನಾ ಭಾರತಕ್ಕೆ ಭೇಟಿ ನೀಡಬೇಕಿತ್ತಾದರೂ ನೋಟು ನಿಷೇಧದಿಂದ ಉಂಟಾಗಿದ್ದ ರಾಜಕೀಯ ಪರಿಸ್ಥಿತಿಗಳಿಂದ ಭೇಟಿಯನ್ನು ಮುಂದೂಡಲಾಗಿತ್ತು. 
ಇಂಡಿಯನ್ ಓಶನ್ ರಿಮ್ ಅಸೋಸಿಯೇಷನ್ ಶೃಂಗಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶೇಖ್ ಹಸೀನಾ ಶೀಘ್ರವೇ ಭಾರತಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ. ಏಪ್ರಿಲ್ ನಲ್ಲಿ ಶೇಖ್ ಹಸೀನಾ ಅವರು ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಫೆಬ್ರವರಿ ತಿಂಗಳಲ್ಲಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದ ವಿದೇಶಾಂಗ ಕಾರ್ಯದರ್ಶಿ ಎಸ್ ಜೈಶಂಕರ್ ಅವರಿಗೆ ಬಾಂಗ್ಲಾ ಸರ್ಕಾರದ ಮಾಧ್ಯಮ ಕಾರ್ಯದರ್ಶಿ ಎಂ ನಜ್ರುಲ್ ಇಸ್ಲಾಂ ಹೇಳಿದ್ದರು. 
ಭಾರತಕ್ಕೆ ಭೇಟಿ ನೀಡುವಂತೆ ಬಾಂಗ್ಲಾ ಪ್ರಧಾನಿಗೆ ಪ್ರಧಾನಿ ನರೇಂದ್ರ ಮೋದಿ 2015 ರಲ್ಲಿ ಆಹ್ವಾನ ನೀಡಿದ್ದರು. ಬಾಂಗ್ಲಾದೇಶದೊಂದಿಗಿನ ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ಪಶ್ಚಿಮ ಬಂಗಾಳ ಸರ್ಕಾರ ಪ್ರಮುಖ ಪಾತ್ರ ಹೊಂದಿವೆ. ಆದರೆ ನೋಟು ನಿಷೇಧಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ-ಪಶ್ಚಿಮ ಬಂಗಾಳ ಸರ್ಕಾರದ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ತೀಸ್ತಾ ನದಿ ನೀರು ಹಂಚಿಕೆ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವುದೇ ಚರ್ಚೆ, ನಿರ್ಧಾರಕ್ಕೆ ಬರಲು ಸಾಧ್ಯವಾಗಿರಲಿಲ್ಲ. ತೀಸ್ತಾ ನದಿ ನೀರು ಹಂಚಿಕೆಯನ್ನು ಹೊರತುಪಡಿಸಿ ಗಡಿ ವಿವಾದ ಸೇರಿದಂತೆ ಅನೇಕ ವಿವಾದಗಳನ್ನು ಭಾರತ-ಬಾಂಗ್ಲಾ ಇತ್ತೀಚಿನ ದಿನಗಳಲ್ಲಿ ಬಗೆಹರಿಸಿಕೊಂಡಿವೆ.
SCROLL FOR NEXT