ದೇಶ

ಭಾರತೀಯ ಶಿಕ್ಷಣ ಸಂಸ್ಥೆಗಳು ವಿಶ್ವದಲ್ಲಿ ಅತ್ಯುತ್ತಮವಾಗಬಹುದು: ರಾಷ್ಟ್ರಪತಿ ಮುಖರ್ಜಿ

Sumana Upadhyaya
ನವದೆಹಲಿ: ಭಾರತದ ಶೈಕ್ಷಣಿಕ ಸಂಸ್ಥೆಗಳು ಅರ್ಹತೆಯಲ್ಲಿ ಹಿಂದೆ ಉಳಿದಿಲ್ಲ ಮತ್ತು ವಿಶ್ವದ ಉತ್ತಮ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸೇರಬಹುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
'ಟೈಮ್ಸ್ ಉನ್ನತ ಶಿಕ್ಷಣ ಸಂಸ್ಥೆಗಳು-2017'ರ ಶ್ರೇಣಿಯಲ್ಲಿ ಉತ್ತಮ ಕಿರು ವಿಶ್ವ ವಿದ್ಯಾಲಯಗಳ ವಿಭಾಗದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ಅತ್ಯುತ್ತಮ 10 ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಐಐಎಸ್ಸಿ ನಿರ್ದೇಶಕ ಪ್ರೊ. ಅನುರಾಗ್ ಕುಮಾರ್ ಅವರಿಗೆ ಕಳುಹಿಸಿರುವ ಸಂದೇಶದಲ್ಲಿ ರಾಷ್ಟ್ರಪತಿಗಳು, ನಿಮ್ಮ ಸಂಸ್ಥೆ ಉತ್ತಮ 10 ಸಣ್ಣ ವಿಶ್ವ ವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದಕ್ಕೆ ನನ್ನ ತುಂಬು ಹೃದಯದ ಶುಭಾಶಯಗಳು ಎಂದು ಹೇಳಿದ್ದಾರೆ.
ಉನ್ನತ ಶಿಕ್ಷಣದಲ್ಲಿ ವಿಶ್ವದಲ್ಲಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪೈಕಿ ಸ್ಥಾನ ಗಿಟ್ಟಿಸಲು ಪ್ರಯತ್ನಿಸಿ ಎಂಬ ನನ್ನ ಕರೆಗೆ ಸ್ಪಂದಿಸಿ ಆ ನಿಟ್ಟಿನಲ್ಲಿ ಶ್ರಮ ವಹಿಸಿದ ನಿಮ್ಮ ಇಡೀ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಿ ಎಂದು ರಾಷ್ಟ್ರಪತಿ ತಮ್ಮ ಸಂದೇಶದಲ್ಲಿ ಕಳುಹಿಸಿದ್ದಾರೆ.
ಭವಿಷ್ಯದಲ್ಲಿ ನಿಮ್ಮ ಶಿಕ್ಷಣ ಸಂಸ್ಥೆ ಇನ್ನಷ್ಟು ಪ್ರಯತ್ನಪಟ್ಟು ಶ್ರೇಷ್ಠ ಸಾಧನೆ ಮಾಡುವಲ್ಲಿ ಪ್ರಯತ್ನಿಸಲಿದೆ ಎಂಬ ವಿಶ್ವಾಸ ನನಗಿದೆ  ಎಂದು ಹೇಳಿದ್ದಾರೆ.
SCROLL FOR NEXT