ಲಖನೌ: ಲಖನೌನಲ್ಲಿ ಭಯೋತ್ಪಾದಕ ನಿಗ್ರಹ ಪಡೆ(ಎಟಿಎಸ್) ಗುಂಡೇಟಿಗೆ ಬಲಿಯಾದ ಶಂಕಿತ ಭಯೋತ್ಪಾದಕ ಸೈಫುಲ್ಲಾ ಮೃತದೇಹವನ್ನು ಸ್ವೀಕರಿಸಲು ಆತನ ತಂದೆ ಸರ್ತಾಜ್ ನಿರಾಕರಿಸಿದ್ದಾರೆ.
ಭಯೋತ್ಪಾದಕ ನನ್ನ ಮಗನಾಗಲು ಸಾಧ್ಯವಿಲ್ಲ. ನಮ್ಮ ಪೂರ್ವಜರು ಹುಟ್ಟಿದ್ದು ಇದೇ ನಾಡಲ್ಲಿ, ನಾನು ಹುಟ್ಟಿದ್ದು ಇಲ್ಲೆ, ನಾವು ಭಾರತೀಯರು. ಇಲ್ಲೆ ಹುಟ್ಟಿ ಬೆಳೆದು ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಆತ ನನ್ನ ಮಗನಾಗಲು ಸಾಧ್ಯವಿಲ್ಲ. ಆತನ ಭಯೋತ್ಪಾದನೆಯ ಕೃತ್ಯಗಳು ನನಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಆತನ ಮೃತದೇಹ ಸ್ವೀಕರಿಸಲ್ಲ ಎಂದು ಸರ್ತಾಜ್ ಹೇಳಿದ್ದಾರೆ.
ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ 9 ಮಂದಿ ಭಯೋತ್ಪಾದಕರ ಪೈಕಿ ಸೈಫುಲ್ಲಾ ಸಹ ಒಬ್ಬನಾಗಿದ್ದ. ಲಖನೌ ಹೊರವಲಯದ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಸೈಫುಲ್ಲಾನನ್ನು ಹೊಡೆದುರುಳಿಸುವಲ್ಲಿ ಭಯೋತ್ಪಾದನಾ ನಿಗ್ರಹ ದಳ ಯಶಸ್ವಿಯಾಗಿತ್ತು.
ಉಜ್ಜೈನ್ ರೈಲು ಸ್ಫೋಟ ಪ್ರಕರಣದಲ್ಲಿ ಒಟ್ಟು 9 ಮಂದಿ ಶಂಕಿತ ಉಗ್ರರ ಕೈವಾಡದ ಕುರಿತು ಮಾಹಿತಿಗಳು ಲಭ್ಯವಾಗಿವೆ.
ಮೃತ ಉಗ್ರ ಸೈಫುಲ್ಲಾ ಕಾನ್ಪುರದಲ್ಲಿ ವಾಸವಾಗಿದ್ದು, ಸೈಫುಲ್ಲಾನ ಇಬ್ಬರು ಸೋದರರನ್ನು ನಿನ್ನೆ ಪೊಲೀಸರು ಬಂಧಿಸಿದ್ದರು.