ರಾಜನಾಥ್ ಸಿಂಗ್-ಸರ್ತಾಜ್ ಮೊಹಮ್ಮದ್
ನವದೆಹಲಿ: ಶಂಕಿತ ಉಗ್ರ ಸೈಫುಲ್ಲಾ ಮೃತದೇಹವನ್ನು ಪಡೆಯಲು ನಿರಾಕರಿಸಿದ ತಂದೆ ಸರ್ತಾಜ್ ಮೊಹಮ್ಮದ್ ಬಗ್ಗೆ ಲೋಕಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ ರಾಜನಾಥ್ ಸಿಂಗ್ ಅವರಿಗೆ ಸರ್ತಾಜ್ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಕರಣ ಸಂಬಂಧ ಇಂದು ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಶಂಕಿತ ಉಗ್ರ ಸೈಫುಲ್ಲಾನನ್ನು ಎಟಿಎಸ್ ಅಧಿಕಾರಿಗಳು ನಿನ್ನೆ ಲಖನೌನಲ್ಲಿ ಹತ್ಯೆ ಮಾಡಿದ್ದು, ಸೈಫುಲ್ಲಾ ಮೃತದೇಹ ಸ್ವೀಕಾರ ಕುರಿತಂತೆ ತಂದೆ ಸರ್ತಾಜ್ ಮೊಹಮ್ಮದ್ ಒಬ್ಬ ಭಾರತೀಯನಾಗಿ ಭಾರತದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿ ಆತ ನನ್ನ ಮಗನಾಗಲು ಸಾಧ್ಯವಿಲ್ಲ. ಹೀಗಾಗಿ ನಾನು ಭಯೋತ್ಪಾದಕನ ಮೃತದೇಹವನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿರುವುದು ದೇಶ ಹೆಮ್ಮೆ ಪಡುವಂತಾ ವಿಷಯ. ಸರ್ತಾಜ್ ಅವರ ಬಗ್ಗೆ ಸರ್ಕಾರಕ್ಕೆ ಹೆಮ್ಮೆ ಇದೆ ಎಂದು ಹೇಳಿದ್ದರು.
ಈ ಬಗ್ಗೆ ಕಾನ್ಪುರದಲ್ಲಿ ಪ್ರತಿಕ್ರಿಯಿಸಿರುವ ಸರ್ತಾಜ್ ಮೊಹಮ್ಮದ್ ಅವರು ರಾಜನಾಥ್ ಸಿಂಗ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದು ದೇಶಕ್ಕೆ ಒಂದು ಸಂದೇಶವಾಗಬೇಕು. ಇಂತ ಸಚಿವರಿಗೆ ಸಾಮಾನ್ಯ ಜನರಾದ ನಾವು ಗೌರವ ನೀಡಬೇಕು ಎಂದರು.
ಭಯೋತ್ಪಾದಕ ನನ್ನ ಮಗನಾಗಲು ಸಾಧ್ಯವಿಲ್ಲ. ನಮ್ಮ ಪೂರ್ವಜರು ಹುಟ್ಟಿದ್ದು ಇದೇ ನಾಡಲ್ಲಿ, ನಾನು ಹುಟ್ಟಿದ್ದು ಇಲ್ಲೆ, ನಾವು ಭಾರತೀಯರು. ಇಲ್ಲೆ ಹುಟ್ಟಿ ಬೆಳೆದು ದೇಶದಲ್ಲಿ ಭಯೋತ್ಪಾದನೆ ಕೃತ್ಯ ನಡೆಸಿದ ಆತ ನನ್ನ ಮಗನಾಗಲು ಸಾಧ್ಯವಿಲ್ಲ. ಆತನ ಭಯೋತ್ಪಾದನೆಯ ಕೃತ್ಯಗಳು ನನಗೆ ತಿಳಿದಿರಲಿಲ್ಲ. ಹೀಗಾಗಿ ನಾನು ಆತನ ಮೃತದೇಹ ಸ್ವೀಕರಿಸಲ್ಲ ಎಂದು ನಿನ್ನೆ ಸರ್ತಾಜ್ ಹೇಳಿದ್ದರು.
ಲಖನೌ ಹೊರವಲಯದ ಠಾಕೂರ್ ಗಂಜ್ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ ಸೈಫುಲ್ಲಾನನ್ನು ಭಯೋತ್ಪಾದನಾ ನಿಗ್ರಹ ದಳ ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಹೊಡೆದುರುಳಿಸಿತ್ತು.