ನವದೆಹಲಿ: ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಸತತ 6 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಡಿ ಸಾವನ್ನಪ್ಪಿದ್ದ ಕರ್ನಾಟಕದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರ ಪತ್ನಿಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಉದ್ಯೋಗ ನೀಡಿದ್ದಾರೆ.
ಜವಳಿ ಖಾತೆ ಸಚಿವೆಯಾಗಿರುವ ಸ್ಮೃತಿ ಇರಾನಿ ಅವರು, ಹನುಮಂತಪ್ಪ ಕೊಪ್ಪದ್ ಅವರ ಪತ್ನಿ ಮಹಾದೇವಿ ಕೊಪ್ಪದ್ ಅವರಿಗೆ ಕೇಂದ್ರ ರೇಷ್ಮೆ ಬೋರ್ಡ್‍ನಲ್ಲಿ ಉದ್ಯೋಗಾವಕಾಶ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸ್ಮೃತಿ ಇರಾನಿ ಅವರ ಕೆಲಸದ ಆಫರ್ ಅನ್ನು ಹನುಮಂತಪ್ಪ ಕೊಪ್ಪದ್ ಅವರ ಕುಟುಂಬ ಒಪ್ಪಿಕೊಂಡಿದ್ದು, ಕೆಲಸ ಮಾಡುವುದಾಗಿ ಮಹಾದೇವಿ ಕೊಪ್ಪದ್ ಹೇಳಿದ್ದಾರೆ.
ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಅವರು ಸಿಯಾಚಿನ್‍ನಲ್ಲಿ ಹಿಮಪಾತದಲ್ಲಿ ಸಿಲುಕಿ 6 ದಿನಗಳ ನಂತರ ಜೀವಂತವಾಗಿ ಪತ್ತೆಯಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಅವರು 2016ರ ಫೆಬ್ರವರಿಯಲ್ಲಿ ಮೃತಪಟ್ಟಿದ್ದರು. ಕೊಪ್ಪದ್ ತಮ್ಮ ಹೆಂಡತಿ, 3 ವರ್ಷದ ಮಗು ನೇತ್ರಾ ಹಾಗೂ ಕುಟುಂಬಸ್ಥರನ್ನು ಅಗಲಿದ್ದರು. ಇದೇ ವರ್ಷ ಹನುಮಂತಪ್ಪ ಕೊಪ್ಪದ್ ಅವರಿಗೆ ಕೇಂದ್ರ ಸರ್ಕಾರ ಮರಣೋತ್ತರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
ಬಳಿಕ ರಾಜ್ಯ ಸರ್ಕಾರ ಕೊಪ್ಪದ್ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ, 4 ಎಕರೆ ಜಮೀನು ನೀಡಿತ್ತು. ಕೊಪ್ಪದ್ ಅವರ ಪತ್ನಿಗೆ ಸರ್ಕಾರಿ ಕೆಲಸ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಭರವಸೆ ನೀಡಿ ಒಂದು ವರ್ಷವಾದರೂ ರಾಜ್ಯ ಸರ್ಕಾರ ಈ ಬಗ್ಗೆ ಕ್ರಮ ಕೈಗೊಂಡಿಲ್ಲ.