ನವದೆಹಲಿ: ದೆಹಲಿಯ ಎಟಿಎಂ ನಲ್ಲಿ 2000 ರೂಪಾಯಿ ಮುಖಬೆಲೆಯ ನಕಲಿ ನೋಟು ಪುನರಾವರ್ತನೆಯಾಗಿದೆ. ದಕ್ಷಿಣ ದೆಹಲಿಯ ಅಮರ್ ಕಾಲೋನಿಯ ಎಟಿಎಂ ನಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ಮುದ್ರಿತವಾಗಿರುವ ನೋಟು ಎಟಿಎಂ ನಲ್ಲಿ ಗ್ರಾಹಕರೊಬ್ಬರಿಗೆ ಸಿಕ್ಕಿದೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಎಟಿಎಂ ನಲ್ಲಿ ನಕಲಿ ನೋಟು ಪಡೆದ ಗ್ರಾಹಕ ಚಂದ್ರನ್ ಪಿಸಿಆರ್ ಕರೆ ಮೂಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಮನೋರಂಜನ್ ಬ್ಯಾಂಕ್ ಎಂದು ನಕಲಿ ನೋಟಿನ ಮೇಲೆ ಮುದ್ರಿಸಲಾಗಿದೆ. ಐಪಿಸಿ ಸೆಕ್ಷನ್ 489 ಬಿ, 489 ಇ ಪ್ರಕಾರ ಪ್ರಕರಣ ದಾಖಲಾಗಿದ್ದು, ಕ್ರೈಂ ಬ್ರಾಂಚ್ ಗೆ ಈ ಪ್ರಕರಣವನ್ನು ವರ್ಗಾವಣೆ ಮಾಡಲಾಗಿದೆ ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಫೆ.6 ರಂದು ಸಹ ದೆಹಲಿಯ ಎಟಿಎಂ ನಲ್ಲಿ ಇದೇ ರೀತಿಯ ನಕಲಿ ನೋಟು ಪತ್ತೆಯಾಗಿತ್ತು. ನಕಲಿ ನೋಟು ಎಟಿಎಂ ನಲ್ಲಿ ಸಿಗಲು ಕಾರಣವಾಗಿರುವ ಎಟಿಎಂ ಗಳಿಗೆ ಹಣ ವಿತರಿಸುವ ಕ್ಯಾಶ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮಾಹಿತಿಯನ್ನು ಪಡೆಯಲು ಪೊಲೀಸ್ ಅಧಿಕಾರಿಗಳು ಯತ್ನಿಸುತ್ತಿದ್ದಾರೆ.