ರಕ್ಷಣಾ ಸಚಿವ ಮನೋಹರ್ ಪರಿಕ್ಕರ್
ನವದೆಹಲಿ: 'ಸಹಾಯಕ್ ಪದ್ಧತಿ'ಯನ್ನು ಅನುಸರಿಸುತ್ತಿರುವ ಹಿರಿಯ ಅಧಿಕಾರಿಗಳು ಯೋಧರಿಗೆ ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿದ್ದು, ಸಹಾಯಕ್ ಪದ್ಧತಿ ಕುರಿತಂತೆ ಬಂದಿರುವ ದೂರುಗಳನ್ನು ಸೇನೆ ಪರಿಶೀಲನೆ ನಡೆಸುತ್ತಿದೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಬಜೆಟ್ ಅಧಿವೇಶನದಲ್ಲಿ ಮಾತನಾಡಿರುವ ಅವರು, ಸಹಾಯಕ್ ಪದ್ಧತಿ ವಿರುದ್ಧ ಆರೋಪಗಳು ಕೇಳಿಬಂದಿದ್ದು, ಕೆಲ ಯೋಧರು ದೂರು ನೀಡಿದ್ದಾರೆ. ಪ್ರಸ್ತುತ ಸಹಾಯಕ್ ಪದ್ಧತಿ ಕುರಿತಂತೆ ಎದ್ದಿರುವ ಸಮಸ್ಯೆಗೆ ಸೇನೆ ಪರಿಹಾರ ಹುಡುಕುತ್ತಿದ್ದು, ಈ ಕುರಿತ ದೂರುಗಳನ್ನು ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಸಹಾಯಕ್ ಪದ್ಧತಿ ವಿರುದ್ಧ ಈ ಹಿಂದೆ ಲಾನ್ಸ್ ನಾಯ್ಕ್ ರಾಯ್ ಮ್ಯಾಥ್ಯೂ ಎಂಬ ಯೋಧ ತಿರುಗಿ ಬಿದ್ದಿದ್ದರು. ವೆಬ್ ಸೈಟ್ ಸುದ್ದಿ ಮಾಧ್ಯಮವೊಂದು ನಡೆಸಿದ್ದ ಈ ಕಾರ್ಯಾಚರಣೆಯಲ್ಲಿ ಯೋಧ ಮ್ಯಾಥ್ಯೂ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಈ ಕುಟುಕು ಕಾರ್ಯಾಚರಣೆ ಬಹಿರಂಗಗೊಂಡ ಕೇಲವೇ ದಿನಗಳಲ್ಲಿ ಮ್ಯಾಥ್ಯೂ ಅವರು ನಿಗೂಢವಾಗಿ ಸಾವನ್ನಪ್ಪಿದ್ದರು.
ಇದರ ಬೆನ್ನಲ್ಲೇ ಜೋಗಿದಾಸ್ ಎಂಬ ಯೋಧ ಕೂಡ ಸಹಾಯಕ್ ಪದ್ಧತಿ ವಿರುದ್ದ ದನಿ ಎತ್ತಿದ್ದರು. ಸಹಾಯಕ್ ಪದ್ಧತಿ ಕುರಿತಂತೆ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದ ಜೋಗಿದಾಸ್ ಅವರು, ರಜೆ ಮುಗಿಸಿ ಬರಲು ಎರಡು ದಿನ ತಡ ಮಾಡಿದ್ದಕ್ಕಾಗಿ ತಮಗೆ ಈ ರೀತಿ ಶಿಕ್ಷೆಯ ವಿಧಿಸಲಾಗಿದೆ ಎಂದು ಹೇಳಿಕೊಂಡಿದ್ದರು.
ರಾಷ್ಟ್ರದ ಘನತೆ ಎಲ್ಲಕ್ಕಿಂತಲೂ ಹೆಚ್ಚಿನದು ಎಂದು ಸೇನೆಗೆ ಬರುವ ಪ್ರತೀಯೊಬ್ಬ ಯೋಧನೂ ಭಾವಿಸುತ್ತಾರೆ, ಆದರೆ, ಕೆಲ ಅಧಿಕಾರಿಗಳು ಸಹಾಯಕರನ್ನು ಗುಲಾಮರಂತೆ ನೋಡುತ್ತಿದ್ದಾರೆ. ಇದರ ವಿರುದ್ಧ ದನಿಯೆತ್ತಿದವರನ್ನು ಶಿಕ್ಷಿಸಲಾಗುತ್ತದೆ. ಇದನ್ನು ಇನ್ನು ಎಷ್ಟು ದಿನಗಳ ಕಾಲ ಸಹಿಸಿಕೊಳ್ಳಲು ಸಾಧ್ಯ? ಎಂದು ಪ್ರಶ್ನಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics