ನವದೆಹಲಿ: ಸುಪ್ರೀಂಕೋರ್ಟ್ ಹಂತದಲ್ಲಿ ನನ್ನ ವಿರುದ್ಧ ಆರೋಪಗಳನ್ನುಮಾಡಲಾಗುತ್ತಿದ್ದು, ನ್ಯಾಯಯುತ ವಿಚಾರಣೆಯಿಲ್ಲದೆಯೇ ಸರ್ಕಾರ ನನ್ನನ್ನು ತಪ್ಪಿತಸ್ಥನಾಗಿಸುವ ಪ್ರಯತ್ನ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಉದ್ಯಮಿ ವಿಜಯ್ ಮಲ್ಯ ಅವರು ಶುಕ್ರವಾರ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವಅವರು, ಗೌರವಾನ್ವಿತ ಸುಪ್ರೀಂಕೋರ್ಟ್ ಆದೇಶ ಹೊರಡಿಸುವುದಕ್ಕೂ ಮುನ್ನ ಅಟಾರ್ನಿ ಜನರಲ್ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿದ್ದು, ಸರ್ಕಾರ ನನ್ನ ಮೇಲಿಟ್ಟಿರುವ ಮನೋವೃತ್ತಿಯನ್ನು ತೋರಿಸುತ್ತದೆ. ವಿನಾಯಿತಿಯಿಲ್ಲದೆಯೇ ನ್ಯಾಯಾಲಯದ ಪ್ರತೀಯೊಂದು ಆದೇಶವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕುಗಳು ಕುರಿತ ಸರ್ಕಾರದ ನೀತಿಗಳನ್ನು ಇದೇ ವೇಳೆ ಪ್ರಶ್ನಿಸಿರುವ ಅವರು, ಸುಪ್ರೀಂಕೋರ್ಟ್ ಆದೇಶಕ್ಕೂ ಮುನ್ನವೇ ಎಲ್ಲಾ ಸಾಲಗಳನ್ನು ಇತ್ಯರ್ಥ ಮಾಡಿಕೊಳ್ಳಲು ಸರ್ಕಾರದ ಸಹಕಾರದೊಂದಿಗೆ ಮುಂದೆ ಬಂದಿದ್ದೆ. ಆದರೆ, ಬ್ಯಾಂಕುಗಳು ಅದನ್ನು ಪರಿಗಣಿಸದೆಯೇ ತಿರಸ್ಕರಿಸಿದ್ದವು. ನ್ಯಾಯಯುತದ ಆಧಾರದ ಮೇಲೆ ಎಲ್ಲವನ್ನೂ ಇತ್ಯರ್ಥ ಮಾಡಿಕೊಳ್ಳಲು ನಾನು ಸಿದ್ಧನಿದ್ದೇನೆ. ಈ ಬಗ್ಗೆ ಸುಪ್ರೀಂಕೋರ್ಟ್ ಮಧ್ಯಸ್ಥಿಕೆವಹಿಸಬೇಕೆಂದು ಇಚ್ಛಿಸುತ್ತೇನೆ. ಸಮಸ್ಯೆ ಇತ್ಯರ್ಥಕ್ಕೆ ಬ್ಯಾಂಕುಗಳಿಗೆ ಸುಪ್ರೀಂಕೋರ್ಟ್ ಆದೇಶ ನೀಡಬೇಕಿದ್ದು, ಎಲ್ಲಾ ಸಮಸ್ಯೆಗೂ ಅಂತ್ಯ ಹಾಡಬೇಕಿದೆ. ಬಾಕಿಯಿರುವ ಎಲ್ಲಾ ಸಾಲವನ್ನು ಇತ್ಯರ್ಥಪಡಿಸಿಕೊಳ್ಳಲು ನಾನು ಸಿದ್ಧನಿದ್ದೇನೆಂದು ಸ್ಪಷ್ಟಪಡಿಸಿದ್ದಾರೆ.