ಪಣಜಿ: ಗೋವಾದಲ್ಲಿ ಆಡಳಿತಾರೂಢ ಬಿಜೆಪಿ ಕಾಂಗ್ರೆಸ್ ಗಿಂತ ಕಡಿಮೆ ಸ್ಥಾನಗಳನ್ನು ಗಳಿಸಿದೆ. ಆದರೆ ಒಟ್ಟಾರೆ ಶೇಕಡಾವಾರು ಮತ ಗಳಿಕೆಯಲ್ಲಿ ಬಿಜೆಪಿ ಕಾಂಗ್ರೆಸ್ ಗಿಂತಲೂ ಮುಂದಿದ್ದು ಶೇ.32.5 ರಷ್ಟು ಮತ ಪಡೆದಿದೆ.
ಚುನಾವಣಾ ಆಯೋಗ ನೀಡಿರುವ ಮಾಹಿತಿ ಪ್ರಕಾರ 17 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಶೇ.28.4 ರಷ್ಟು ಮತಗಳನ್ನು ಪಡೆದಿದ್ದು, 13 ಸ್ಥಾನಗಳನ್ನು ಪಡೆದಿರುವ ಬಿಜೆಪಿ ಶೇ.32.5 ರಷ್ಟು ಮತಗಳನ್ನು ಪಡೆದಿದೆ. 3 ಸ್ಥಾನಗಳನ್ನು ಪಡೆದಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ ಶೇ.11.3 ರಷ್ಟು ಮತಗಳನ್ನು ಪಡೆದಿದ್ದು, ನೋಟಾ (ಎಲ್ಲಾ ಪಕ್ಷದ ಅಭ್ಯರ್ಥಿಗಳನ್ನು ತಿರಸ್ಕರಿಸುವ ಆಯ್ಕೆ)ವನ್ನು ಶೇ.1.2 ರಷ್ಟು ಜನರು ಚಲಾವಣೆ ಮಾಡಿದ್ದಾರೆ.
ಪಂಚ ರಾಜ್ಯಗಳಲ್ಲಿ ಪ್ರಕಟವಾದ ಫಲಿತಾಂಶದ ಪೈಕಿ ಗೋವಾದಲ್ಲಿ ಅತಿ ಹೆಚ್ಚು ನೋಟಾ ಆಯ್ಕೆ ಚಲಾವಣೆಯಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಇನ್ನು ಮೊದಲ ಬಾರಿಗೆ ಗೋವಾದಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ ಶೇ.6.3 ರಷ್ಟು, ಗೋವಾ ಫಾರ್ವರ್ಡ್ ಪಕ್ಷ 3.5, ಎನ್ ಸಿಪಿ ಶೇ.2.3 ರಷ್ಟು ಮತಗಳನ್ನು ಸುಭಾಷ್ ವೆಳಿಂಗ್ಕರ್ ಅವರ ಗೋವಾ ಸುರಕ್ಷ ಮಂಚ್ ಶೇ.1.2 ರಷ್ಟು ಮತಗಳನ್ನು ಗೋವಾ ಸುರಾಜ್ ಪಕ್ಷ, ಗೋವಾ ವಿಕಾಸ್ ಪಕ್ಷಗಳು ತಲಾ ಶೇ.0.6 ರಷ್ಟು ಮತಗಳನ್ನು ಪಡೆದಿವೆ.