ಇಂಫಾಲ್: ಮಣಿಪುರ ಮುಖ್ಯಮಂತ್ರಿ ಒಕ್ರಾಮ್ ಇಬೊಬಿ ಸಿಂಗ್ ಅವರು ಭಾನುವಾರ ಮತ್ತೊಮ್ಮೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.
2002ರಿಂದ 2017ರವರೆಗೆ ಸತತ ಮೂರು ಮಣಿಪುರ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ 68 ವರ್ಷದ ಇಬೊಬಿ ಅವರು ಈಗ ನಾಲ್ಕನೆ ಬಾರಿ ಮುಖ್ಯಮಂತ್ರಿಯಾಗಲು ಸಿದ್ಧತೆ ನಡೆಸಿದ್ದಾರೆ.
ಇತ್ತೀಚಿಗೆ ನಡೆದ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ಸ್ಪಷ್ಟ ಬಹುಮತ ಪಡೆದಿಲ್ಲ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
60 ಸದಸ್ಯ ಬಲ ಹೊಂದಿರುವ ಮಣಿಪುರದಲ್ಲಿ ಕಾಂಗ್ರೆಸ್ 28 ಸ್ಥಾನಗಳಲ್ಲಿ, ಬಿಜೆಪಿ 21 ಸ್ಥಾನಗಳಲ್ಲಿ ಹಾಗೂ ಇತರರು 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದಾರೆ. ಸರ್ಕಾರ ರಚನೆಗೆ 31 ಸದಸ್ಯರ ಅಗತ್ಯವಿದ್ದು, ಇತರರ ಬೆಂಬಲ ಪಡೆದು ಸರ್ಕಾರ ರಚಿಸಲು ಕಾಂಗ್ರೆಸ್, ಬಿಜೆಪಿ ಯತ್ನಿಸುತ್ತಿವೆ.