ನವದೆಹಲಿ: ಉತ್ತರ ಪ್ರದೇಶದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ದಾಖಲಿಸಿರುವುದು ಕೆಲವು ರಾಜ್ಯಗಳಲ್ಲಿ ಮುಂಬರುವ ಕೆಲವು ವಿಧಾನಸಭಾ ಚುನಾವಣೆಗಳಿಗೆ ದಿಕ್ಸೂಚಿಯಾಗುವುದಷ್ಟೇ ಅಲ್ಲದೇ ಪಾಕಿಸ್ತಾನ, ಬಾಂಗ್ಲಾದೇಶಗಳಿಗೆ ಸಂಬಂಧಿಸಿದ ಸರ್ಕಾರದ ನೀತಿಗಳ ಮೇಲೂ ದೊಡ್ದ ಪರಿಣಾಮ ಬೀರಲಿದೆ.
ಉರಿ ಸೆಕ್ಟರ್ ನಲ್ಲಿ ಪಾಕ್ ಭಯೋತ್ಪಾದಕರು ದಾಳಿ ನಡೆಸಿದಾಗಿನಿಂದ ಭಾರತ-ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಬಾಂಧವ್ಯ ಮತ್ತಷ್ಟು ಹಾಳಾಗಿದ್ದು, ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಯಾವುದೇ ಮಹತ್ವದ ನಿರ್ಧಾರಗಳನ್ನೂ ಕೈಗೊಂಡಿರಲಿಲ್ಲ. ಆದರೆ ಪಂಚ ರಾಜ್ಯಗಳ ಚುನಾವಣೆಗಳ ಪೈಕಿ ಉತ್ತರ ಪ್ರದೇಶದ ಐತಿಹಾಸಿಕ ಗೆಲುವು, ಉತ್ತರಾಖಂಡ್ ನಲ್ಲಿನ ಬಹುಮತದಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತಷ್ಟು ಬಲ ಬಂದಿದ್ದು, ವಿದೇಶಾಂಗ ನೀತಿಗಳಿಗೆ ಸಂಬಂಧಿಸಿದಂತೆ ಕಠಿಣ ನಿರ್ಧಾರ ಕೈಗೊಳ್ಳುವುದಕ್ಕೆ ಸಹಕಾರಿಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಾಕಿಸ್ತಾನ, ಬಾಂಗ್ಲಾದೇಶಗಳ ಮೇಲೆ ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶ ಪರಿಣಾಮ ಬೀರಲಿದ್ದು. ಬಾಂಗ್ಲಾದೊಂದಿಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯ ವಿಚಾರದಲ್ಲಿ ಮಮತಾ ಬ್ಯಾನರ್ಜಿ ಅವರ ಪ್ರತಿರೋಧವನ್ನೂ ಲೆಕ್ಕಿಸದೇ ಕೇಂದ್ರ ಸರ್ಕಾರ ಮುನ್ನಡೆಯಲಿದೆ ಎಂದೂ ಹೇಳಲಾಗುತ್ತಿದೆ. ಇನ್ನು ನೆರೆ ರಾಷ್ಟ್ರ ನೇಪಾಳದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶ ನೆರವಾಗಲಿದೆ.
ಉತ್ತರ ಪ್ರದೇಶ ಚುನಾವಣೆ ಬಳಿಕ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧದಲ್ಲಿ ಮಹತ್ವದ ಬೆಳವಣಿಗೆ ಸಂಭವಿಸಲಿದೆ ಎಂದು ಪಾಕಿಸ್ತಾನವೂ ಅಭಿಪ್ರಾಯಪಟ್ಟಿತ್ತು. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗಡಿ ಪ್ರದೇಶಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಬೆಂಬಲ ದೊರೆತಿತ್ತು. ಅಂತೆಯೇ ಚುನಾವಣಾ ಫಲಿತಾಂಶದಲ್ಲೂ ಅದು ಸ್ಪಷ್ಟವಾಗಿ ವ್ಯಕ್ತವಾಗಿದ್ದು. ಚುನಾವಣೆಯ ಗೆಲುವಿನ ಆತ್ಮವಿಶ್ವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನ, ಬಾಂಗ್ಲಾಗಳಿಗೆ ಸಂಬಂಧಿಸಿದ ವಿದೇಶಾಂಗ ನೀತಿಗಳ ದಾಳವನ್ನು ಯಾವ ರೀತಿ ಉರುಳಿಸಲಿದ್ದಾರೆ ಎಂಬ ಕುತೂಹಲ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics