ಪಠಾಣ್'ಕೋಟ್; ಕಳೆದ ವರ್ಷ ಉಗ್ರ ದಾಳಿ ನಡೆದಿದ್ದ ಪಠಾಣ್ ಕೋಟ್ ವಾಯುನೆಲೆ ಬಳಿ ಅನುಮಾನಾಸ್ಪದ ವ್ಯಕ್ತಿಗಳು ಅಡಗಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ವಾಯುನೆಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಶಂಕಿತರಿಗಾಗಿ ಪಠಾಣ್ ಕೋಟ್ ಸುತ್ತಮುತ್ತಲ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿಯಾಗಿ 500ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.
ಪಠಾಣ್'ಕೋಟ್ ವಾಯುನೆಲೆ ಬಳಿ ಕೆಲ ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ. ಹೀಗಾಗಿ ಸ್ಥಳದಲ್ಲಿ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಪೊಲೀಸರು ಹಾಗೂ ಸೇನಾ ಪಡೆ ಇದೀಗ ಸ್ಥಳದಲ್ಲಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದು, ಈಗಾಗಲೇ ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೂ ಭದ್ರತೆ ಕುರಿತು ಮಾತುಕತೆ ನಡೆಸಿದ್ದೇನೆಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಿಲಂಬಾರಿ ಜಗ್ದಾಲೆ ಅವರು ಹೇಳಿದ್ದಾರೆ.
2016ರಲ್ಲಿ ನಾಲ್ವರು ಉಗ್ರರು ಪಠಾಣ್ ಕೋಟ್ ಮೇಲೆ ದಾಳಿ ನಡೆಸಿದ್ದರು. ಉಗ್ರರ ದಾಳಿಗೆ 7 ಯೋಧರು ಹುತಾತ್ಮರಾಗಿದ್ದರು.