ಮುಂಬೈ: ಭಯೋತ್ಪಾದನಾ ಕೃತ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಹಾಡುಗಳನ್ನು ಹಾಡುತ್ತಿದ್ದ 16 ವರ್ಷದ ಹರೆಯದ ಉದಯೋನ್ಮುಖ ಗಾಯಕಿ ನಹೀದ್ ಅಫ್ರಿನ್ ವಿರುದ್ಧ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿರುವುದಕ್ಕೆ ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಭಾರತ ಪ್ರಜಾಪ್ರಭುತ್ವ ರಾಷ್ಟ್ರ ಮತ್ತು ದೇಶ ತಾಲಿಬಾಲಿಗಳ ಕೈಯಡಿಯಲ್ಲಿಲ್ಲ. ಮೌಲ್ವಿಗಳು ಯುವ ಪ್ರತಿಭೆ ವಿರುದ್ಧ ಫತ್ವ ಹೊರಡಿಸುವ ಮೂಲಕ ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆ ಎಂದು ಶಿವಸೇನೆ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.
ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ(ಬಿಜೆಪಿ)ಅಧಿಕಾರದಲ್ಲಿದೆ. ಹೀಗಾಗಿ ಮೌಲ್ವಿಗಳು ತಿಳಿದುಕೊಳ್ಳಬೇಕು ಅಸ್ಸಾಂ ಭಾರತದಲ್ಲಿದೆ ಪಾಕಿಸ್ತಾನದಲ್ಲಲ್ಲ. ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನದ ಮೇಲಿ ತಾಲಿಬಾನಿಗಳ ಹಿಡಿತವಿರಬಹುದು. ಅದನ್ನು ಭಾರತದಲ್ಲೂ ಪ್ರಯೋಗಿಸಬಹುದು ಎಂದು ತಿಳಿಯಬೇಡಿ ಎಂದು ಹೇಳಿದ್ದಾರೆ.
ಖಾಸಗಿ ಟಿವಿ ಚಾನೆಲ್ ವೊಂದು 2015ರಲ್ಲಿ ನಡೆಸಿದ್ದ ರಿಯಾಲಿಟಿ ಶೋನಲ್ಲಿ ಅಫ್ರಿನ್ ಮೊದಲ ರನ್ನರ್ ಅಪ್ ಆಗಿದ್ದರು. ಇಸಿಸ್ ಸೇರಿದಂತೆ ಹಲವು ಭಯೋತ್ಪಾದಕ ಸಂಘಟನೆಗಳು ನಡೆಸುತ್ತಿರುವ ಉಗ್ರವಾದದ ವಿರುದ್ಧದ ಗೀತೆಗಳನ್ನು ನಹೀದ್ ಅಫ್ರಿನ್ ಅವರು ಇತ್ತೀಚೆಗೆ ಹಾಡಿದ್ದರು. ಈ ಹಿನ್ನಲೆಯಲ್ಲಿ ಅಫ್ರಿನ್ ಸಾರ್ವಜನಿಕ ಸಂಗೀತ ಕಾರ್ಯಕ್ರಮ ನೀಡದಂತೆ ಅಸ್ಸಾಮಿನ 42 ಮೌಲ್ವಿಗಳು ಫತ್ವಾ ಹೊರಡಿಸಿದ್ದರು.