ನವದೆಹಲಿ: ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಸ್ಯರು ಎದ್ದು ನಿಂತು ಕರತಾಡನ ಮಾಡುವ ಮೂಲಕ ಗೌರವ ಸೂಚಿಸಿ ಸ್ವಾಗತಿಸಿದ್ದರು.
ಸಂಸದೀಯ ಪಕ್ಷದ ಸದಸ್ಯರ ಸ್ವಾಗತಕ್ಕೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಕಾಣುವ ಶೈಲಿಯಲ್ಲೇ ಪಂಚಿಂಗ್ ಪ್ರತಿಕ್ರಿಯೆ ನೀಡಿದ್ದು, ನಾನೂ ಕುಳಿತುಕೊಳ್ಳುವುದಿಲ್ಲ, ನಿಮ್ಮನ್ನೂ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
2019 ರ ಚುನಾವಣೆಗೆ ಮಾರ್ಗಸೂಚಿ ಎಂಬ ರೀತಿಯಲ್ಲಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು 2014 ರ ಚುನಾವಣೆಯಲ್ಲಿ ಹೇಳಿದ್ದ ನಖಾವೂಂಗಾ, ನ ಖಾನೇ ದೂಂಗಾ (ನಾನು ತಿನ್ನುವುದಿಲ್ಲ ಮತ್ತು ತಿನ್ನಲು ಬಿಡುವುದಿಲ್ಲ) ಮಾದರಿಯಲ್ಲೇ ಈಗ ನಾನು ಕುಳಿತುಕೊಳ್ಳುವುದಿಲ್ಲ, ನಿಮ್ಮನ್ನೂ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯ ಬಳಿಕ 2018 ರಲ್ಲಿ ಕರ್ನಾಟಕ, ಗುಜರಾತ್ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಬಿಜೆಪಿ ಹೈಕಮಾಂಡ್ ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲು ತಯಾರಿ ನಡೆಸುತ್ತಿದೆ. 2018 ರ ಬೆನ್ನಲ್ಲೇ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ 2019 ರ ಚುನವಾಣೆಗೆ ಈಗಿನಿಂದಲೇ ಮಾರ್ಗಸೂಚಿ ತಯಾರಿಸುತ್ತಿರುವ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾನೂ ಕುಳಿತುಕೊಳ್ಳುವುದಿಲ್ಲ, ನಿಮ್ಮನ್ನೂ ಕುಳಿತುಕೊಳ್ಳಲು ಬಿಡುವುದಿಲ್ಲ ಎಂಬ ಸಂದೇಶವನ್ನು ಬಿಜೆಪಿ ಸಂಸದೀಯ ಪಕ್ಷದ ಮುಖಂಡರಿಗೆ ನೀಡಿದ್ದಾರೆ.