ನವದೆಹಲಿ: ಪಾಕಿಸ್ತಾನದಲ್ಲಿ ಕಾಣೆಯಾಗಿದ್ದ ದೆಹಲಿಯ ಹಜ್ರತ್ ನಿಜಾಮುದ್ದೀನ್ ದರ್ಗಾದ ಇಬ್ಬರು ಭಾರತೀಯ ಸೂಫಿ ಪಾದ್ರಿಗಳು ಪತ್ತೆಯಾಗಿರುವುದರ ಕುರಿತು ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ತಾನು ಕಾಣೆಯಾಗಿದ್ದ ಪಾದ್ರಿಗಳಲ್ಲೊಬ್ಬರಾದ ಸೈಯದ್ ನಾಜಿಮ್ ಆಲಿ ನಿಜಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ. ಕರಾಚಿಯಲ್ಲಿ ಸುರಕ್ಷಿತವಾಗಿರುವ ಪಾದ್ರಿಗಳಿಬ್ಬರೂ ನಾಳೆ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಹೇಳಿದ್ದಾರೆ.
ಕರಾಚಿಯಲ್ಲಿರುವ ಸೈಯದ್ ನಾಜಿಮ್ ಆಲಿ ನಿಜಾಮಿ ಅವರೊಂದಿಗೆ ಸ್ವಲ್ಪ ಹೊತ್ತಿಗೆ ಮುಂಚೆ ಮಾತುಕತೆ ನಡೆಸಿದ್ದೇನೆ. ಅವರು ಸುರಕ್ಷಿತವಾಗಿದ್ದು, ನಾಳೆ ತಾಯ್ನಾಡಿಗೆ ಮರಳಲಿದ್ದಾರೆ ಎಂದು ಸಚಿವೆ ಟ್ವೀಟ್ ಮಾಡಿದ್ದಾರೆ.
ಕಾಣೆಯಾದ ಇಬ್ಬರು ಪಾದ್ರಿಗಳು ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು ಭಾರತಕ್ಕೆ ನಾಳೆ ಹಿಂತಿರುಗಲಿದ್ದಾರೆ ಎಂದು ಪಾಕಿಸ್ತಾನ ಮಾಧ್ಯಮ ವರದಿ ಮಾಡಿದೆ.
ಕರಾಚಿಯಲ್ಲಿ ಸಿಕ್ಕಿರುವ ಪಾದ್ರಿಗಳು ತಾವು ಸಿಂಧ್ ಪ್ರಾಂತ್ಯದಲ್ಲಿ ಭಕ್ತರನ್ನು ಭೇಟಿ ಮಾಡಲು ಬಂದಿದ್ದು, ಅಲ್ಲಿ ದೂರವಾಣಿ ಸಂಪರ್ಕವಿರಲಿಲ್ಲ ಎಂದು ಹೇಳಿದ್ದಾರೆ.
ಸೈಯದ್ ಆಸಿಫ್ ಆಲಿ ನಿಜಾಮಿ ಮತ್ತು ಆತನ ಸ್ನೇಹಿತ ನಾಜಿಮ್ ನಿಜಾಮಿ ದೆಹಲಿಯ ಹಸ್ರತ್ ನಿಜಾಮುದ್ದೀನ್ ದರ್ಗಾಕ್ಕೆ ಸೇರಿದ್ದಾರೆ. ಸೈಯದ್ ಅವರು ದರ್ಗಾದ ಮುಖ್ಯಸ್ಥರಾಗಿದ್ದು, ಅವರು ಪಾಕಿಸ್ತಾನದ ಕರಾಚಿಯಲ್ಲಿ ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದರು. ನಂತರ ಲಾಹೋರ್ ಗೆ ಯಾತ್ರೆ ಕೈಗೊಂಡಿದ್ದರು.