ನವದೆಹಲಿ: ಪಾಕಿಸ್ತಾನದಲ್ಲಿ ಇತ್ತೀಚೆಗೆ ನಾಪತ್ತೆಯಾಗಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಮುಸ್ಲಿಂ ಮೌಲ್ವಿಗಳು ದೇಶವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು, ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಮೌಲ್ವಿಗಳನ್ನು ನಂಬುವಂತಿಲ್ಲ. ದೇಶದ ಜನರ ಸಹಾನುಭೂತಿ ಗಳಿಸಲು ಅವರು ಸುಳ್ಳು ಹೇಳುತ್ತಿದ್ದಾರೆ. ನಮಗೆ ಸಿಕ್ಕ ಖಾಸಗಿ ಮಾಹಿತಿಗಳ ಅನ್ವಯ ಈ ಇಬ್ಬರೂ ಮೌಲ್ವಿಗಳು ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಇನ್ನು ನಿನ್ನೆಯಷ್ಟೇ ಪಾಕಿಸ್ತಾನದಿಂದ ಭಾರತಕ್ಕೆ ವಾಪಸಾದ ಮೌಲ್ಪಿಗಳು, ತಮ್ಮನ್ನು ಪಾಕಿಸ್ತಾನದ ಉಮ್ಮಾತ್ ಎಂಬ ಪತ್ರಿಕೆಯಲ್ಲಿ ಭಆರತದ ಗುಪ್ತಚರ ಸಂಸ್ಥೆ "ರಾ"ದ ಏಜೆಂಟ್ ಗಳು ಎಂದು ಬಿಂಬಿಸಿತ್ತು. ಹೀಗಾಗಿ ಪಾಕಿಸ್ತಾನದಲ್ಲಿ ತಮಗೆ ಬೆದರಿಕೆ ಇತ್ತು. ಇದೀಗ ಭಾರತ ಸರ್ಕಾರದ ಮಧ್ಯ ಪ್ರವೇಶದೊಂದಿಗೆ ತಾವು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಆಗಿದ್ದೇವೆ ಎಂದು ಹೇಳಿದ್ದರು. ಇನ್ನು ನಾಪತ್ತೆ ವಿಚಾರದ ಕುರಿತು ಕೇಳಿದ್ದ ಪ್ರಶ್ನೆಗೆ ಉತ್ತರಿಸಿದ ಮೌಲ್ವಿ ನಜಿಮ್ ನಿಜಾಮಿ, ಸಿಂಧ್ ಪ್ರಾಂತ್ಯದಲ್ಲಿರುವ ತಮ್ಮ ಬೆಂಬಲಿಗರನ್ನು ನೋಡಲು ಹೋಗಿದ್ದೆವು. ಆಗ ನಮ್ಮ ಮೊಬೈಲ್ ಗಳು ರೀಚ್ ಆಗುತ್ತಿರಲಿಲ್ಲ ಎಂದು ಹೇಳಿದ್ದರು.
ಭಾರತದ ದೆಹಲಿಯ ಹಜ್ರತ್ ನಿಜಾಮದ್ದೀನ್ ದರ್ಗಾ ಮೌಲ್ವಿಗಳಾದ ಆಸಿಫ್ ಅಲಿ ನಿಜಾಮಿ ಮತ್ತು ನಜಿಮ್ ನಿಜಾಮಿ ಪಾಕಿಸ್ತಾನದ ಲಾಹೋರ್ ಮತ್ತು ಕರಾಚಿಯಿಂದ ನಾಪತ್ತೆಯಾಗಿದ್ದರು. ಪಾಕ್ ನಲ್ಲಿರುವ ತಮ್ಮ ಕುಟುಂಬಸ್ಥರನ್ನು ನೋಡಲು ಹೋಗಿದ್ದ ಮೌಲ್ವಿಗಳ ನಾಪತ್ತೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಕೇಂದ್ರ ವಿದೇಶಾಂಗ ಇಲಾಖೆ ಮಧ್ಯ ಪ್ರವೇಶದಿಂದಾಗಿ ಮೌಲ್ವಿಗಳು ಪತ್ತೆಯಾಗಿ ನಿನ್ನೆ ಭಾರತಕ್ಕೆ ವಾಪಸ್ ಆಗಿದ್ದರು.