ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ಸಂಸತ್ ಕಲಾಪಕ್ಕೆ ಗೈರು ಹಾಜರಾಗುವ ಲೋಕಸಭೆ, ರಾಜ್ಯಸಭೆ ಸದಸ್ಯರ ಧೋರಣೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಮಂಗಳವಾರ ತಿಳಿದುಬಂದಿದೆ.
ಸೋಮವಾರ ರಾಜ್ಯಸಭೆಯಲ್ಲಿ ಹಲವು ಮಹತ್ವದ ವಿಷಯಗಳು ಚರ್ಚೆಯಾಗಬೇಕಿದ್ದು, ಆದರೆ, ಕೆಲ ಸಚಿವರು ಕಲಾಪದಲ್ಲಿ ಇಲ್ಲದಿದ್ದರಿಂದಾಗಿ ಚರ್ಚೆ ನಡೆದಿರಲಿಲ್ಲ. ಪ್ರಶ್ನೋತ್ತರ ವೇಳೆಯಲ್ಲಿ ನಿರ್ಮಲಾ ಸೀತಾರಾಮನ್, ಸಂಜೀವ್ ಬಾಲ್ಯನ್ ಮತ್ತಿತರರು ಮಾತ್ರ ಹಾಜರಿದ್ದರು. ಸಚಿವರ ಗೈರು ಹಾಜರಾತಿ ಕುರಿತಂತೆ ಕಾಂಗ್ರೆಸ್ ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿಗೆ ದೂರು ನೀಡಲಾಗಿತ್ತು. ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್ ಅವರು, ಸಚಿವರ ಗೈರು ಅವರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ ಎಂದು ಆರೋಪಿಸಿದ್ದರು.
ನವದೆಹಲಿಯಲ್ಲಿ ಇಂದು ನಡೆದ ಪಕ್ಷದ ಸಂಸದೀಯ ಸಭೆಯಲ್ಲಿ ಕಲಾಪ ಸಂದರ್ಭದಲ್ಲಿ ಸಂಸದರ ಗೈರುಹಾಜರಿ ಕುರಿತ ವಿಚಾರವನ್ನು ಚರ್ಚಿಸಲಾಗಿದೆ. ಈ ವೇಳೆ ಪ್ರಧಾನಿ ಮೋದಿಯವರು ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆಂದು ಹೇಳಲಾಗುತ್ತಿದೆ.
ಈ ವೇಳೆ ಸಂಸದರಿಗೆ ಎಚ್ಚರಿಕೆ ನೀಡಿರುವ ಅವರು, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಯಾರಾದರೂ ಸಂಸದರು ಯಾವುದೇ ಕಾರಣಗಳನ್ನೂ ನೀಡದೆಯೇ ಗೈರು ಹಾಜರಾಗಿರುವುದು ಕಂಡುಬಂದರೆ, ನಾನೇ ವೈಯಕ್ತಿಕವಾಗಿ ಅವರಿಗೆ ಕರೆ ಮಾಡಿ ಸ್ಪಷ್ಟನೆ ಕೇಳುತ್ತೇನೆ. ಚುನಾವಣೆಯಲ್ಲಿ ಗೆಲವು ಸಾಧಿಸಲು ನಾನು ಸಹಾಯ ಮಾಡಬಲ್ಲೆ. ಆದರೆ, ಕಲಾಪಕ್ಕೆ ಗೈರು ಹಾಜರಾಗುವ ಸಂಸದರಿಗೆ ನಾನು ಯಾವುದೇ ಕಾರಣಕ್ಕೂ ಸಹಾಯವನ್ನು ಮಾಡುವುದಿಲ್ಲ ಎಂದು ಖಡಕ್ ಆದೇಶವನ್ನು ನೀಡಿದ್ದಾರೆಂದು ಮೂಲಗಳು ತಿಳಿಸಿವೆ.
ಸಂಸದೀಯ ಸಭೆ ಬಳಿಕ ಹೇಳಿಕೆ ನೀಡಿರುವ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಅನಂತ್ ಕುಮಾರ್ ಅವರು, ಕಲಾಪ ನಡೆಯುವ ವೇಳೆ ಸಂಸದರು ಕಡ್ಡಾಯವಾಗಿ ಹಾಜರಿರಬೇಕೆಂದು ಪ್ರಧಾನಿ ಮೋದಿಯವರು ಹೇಳಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos