ಲಖನೌ: ಆ್ಯಸಿಡ್ ದಾಳಿಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತ ಮಹಿಳೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗಳು ಸಂತ್ರಸ್ಥೆಯ ಎದುರೇ ಸೆಲ್ಫಿ ತೆಗೆದುಕೊಳ್ಳುವ ಮೂಲಕ ಹಿರಿಯ ಅಧಿಕಾರಿಗಳ ಕೆಂಗಣ್ಮಿಗೆ ಗುರಿಯಾಗಿ ಅಮಾನತಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಾಮೂಹಿಕ ಅತ್ಯಾಚಾರ ಹಾಗೂ ಆ್ಯಸಿಡ್ ದಾಳಿಗೊಳಗಾದ ಮಹಿಳೆಯ ಚಿಕಿತ್ಸಾ ಕೊಠಡಿಯಲ್ಲಿ ಸೆಲ್ಫಿ ತೆಗೆದುಕೊಂಡ ಮಹಿಳಾ ಪೊಲೀಸ್ ಕಾನ್ ಸ್ಟೆಬಲ್‌ಗಳನ್ನು ಉತ್ತರ ಪ್ರದೇಶ ಪೊಲೀಸ್ ವರಿಷ್ಠಾಧಿಕಾರಿಗಳು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮೂಲಗಳ ಪ್ರಕಾರ ಅಲಹಾಬಾದ್-ಲಖನೌ ಮಾರ್ಗವಾಗಿ ಸಂಚಾರಿಸುವ ಗಂಗಾ ಗೋಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಇಬ್ಬರು ದುಷ್ಕರ್ವಿುಗಳು 45 ವರ್ಷದ ಮಹಿಳೆ ಮೇಲೆ ಅತ್ಯಾಚಾರ ವೆಸಗಿ ಬಳಿಕ ಆಕೆಗೆ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದರು. ಸಂತ್ರಸ್ಥ ಮಹಿಳೆ ತನ್ನ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಲಖನೌ ರೈಲು ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದರು. ನಂತರ ರೈಲ್ವೆ ಪೊಲೀಸರು ಸಂತ್ರಸ್ಥ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಸಂತ್ರಸ್ಥ ಮಹಿಳೆ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ ನಿಯೋಜಿತರಾಗಿದ್ದ ಮೂವರು ಮಹಿಳಾ ಕಾನ್‌ಸ್ಟೆಬಲ್‌ಗಳು ಚಿಕಿತ್ಸಾ ಕೊಠಡಿಯಲ್ಲಿ ಸಂತ್ರಸ್ತೆಯ ಸಮೀಪದಲ್ಲೇ ಕುಳಿತು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಪೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳಾ ಪೊಲೀಸ್ ಪೇದೆಗಳ ಕಾರ್ಯಕ್ಕೆ ಎಲ್ಲೆಡೆ ಟೀಕೆಗಳು ವ್ಯಕ್ತವಾಗುತ್ತಿವೆ. ಘಟನೆಗೆ ಸಂಬಂಧಿಸಿದಂತೆ ಲಖನೌ ವಲಯದ ಐಜಿ ಸತೀಶ್ ಗಣೇಶ್ ಅವರು ಕ್ರಮ ಕೈಗೊಂಡಿದ್ದು, ರಜಿನಿ ಬಾಲಾ ಸಿಂಗ್, ಡೈಸಿ ಸಿಂಗ್ ಎಂಬ ಇಬ್ಬರು ಮಹಿಳಾ ಕಾನ್ ಸ್ಟೆಬಲ್‌ಗಳನ್ನು ಅಮಾನತು ಮಾಡಿದ್ದಾರೆ. ಅಂತೆಯೇ ಮೂರನೇ ಕಾನ್ ಸ್ಟೆಬಲ್ ವಿರುದ್ಧ ತನಿಖೆಗೆ ಅದೇಶಿಸಿದ್ದಾರೆ.